×
Ad

ಮದ್ದಿರದ ಮಂಗನ ಕಾಯಿಲೆಗೆ ಲಸಿಕೆ: ಒಂದಿಷ್ಟು ಕಟು ಸತ್ಯಗಳು

Update: 2022-11-05 09:54 IST

ಮಂಗನ ಕಾಯಿಲೆ ಲಸಿಕೆ ಕಳೆದ 21 ವರ್ಷಗಳಿಂದ ಕಾನೂನುಬಾಹಿರವಾಗಿ ಬಳಕೆಯಾಗುತ್ತಿತ್ತೆ? ಅದರ ತಯಾರಿಕೆಗೆ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಯ ಅನುಮತಿ ಇರಲಿಲ್ಲವೇ? ಹಾಗಿದ್ದಲ್ಲಿ, ಕೋವಿಡ್‌ಗಿಂತ ಗಂಭೀರ ಕಾಯಿಲೆಯ ವಿಚಾರದಲ್ಲಿ ಇದೆಂಥ ಬಗೆಯ ಅಸಡ್ಡೆ? ಆರೂವರೆ ದಶಕಗಳಿಂದ ಕಾಡುತ್ತಿರುವ ಕಾಯಿಲೆಯ ವಿರುದ್ಧ ಮದ್ದು ಕಂಡುಕೊಳ್ಳುವ ನಿಟ್ಟಿನಲ್ಲೇಕೆ ಸರಕಾರಕ್ಕೆ ಇಚ್ಛಾಶಕ್ತಿಯಿಲ್ಲ?

ಒಂದು ವರದಿಯ ಪ್ರಕಾರ, ಮಂಗನ ಕಾಯಿಲೆಗೆ ನೀಡಲಾಗುತ್ತಿದ್ದ ಲಸಿಕೆ ರಾಜ್ಯ ಸರಕಾರದ ಆರೋಗ್ಯ ಇಲಾಖೆಯಲ್ಲಿ ಇಲ್ಲ. ಲಸಿಕೆ ದಾಸ್ತಾನು ಮುಗಿದುಹೋಗಿರುವ ಬಗ್ಗೆ ಅಕ್ಟೋಬರ್‌ನಲ್ಲಿ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಮೂಲಕ ತಿಳಿಸಿದೆ ಎಂದು ವರದಿ ಬಹಿರಂಗಪಡಿಸಿದೆ. ಮಲೆನಾಡಿಗರನ್ನು ದಶಕಗಳಿಂದ ಬಾಧಿಸುತ್ತಿರುವ ಮಂಗನ ಕಾಯಿಲೆಯನ್ನು ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದು ಕರೆಯಲಾಗುತ್ತದೆ. ಇದಕ್ಕೆ ಈವರೆಗೂ ನಿರ್ದಿಷ್ಟವಾದ ಮದ್ದೆಂಬುದಿಲ್ಲ. ಕಾಯಿಲೆ ನಿಯಂತ್ರಣಕ್ಕಾಗಿ ಕೊಡಲಾಗುವ ವ್ಯಾಕ್ಸಿನ್ ಕೂಡ ಅಂಥ ಪರಿಣಾಮಕಾರಿಯೇನಲ್ಲ. ಆದರೆ ಅದೂ ಈ ಬಾರಿ ಇಲ್ಲ. ಜನರಲ್ಲಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದೂ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂಬುದು ಈಗ ಗೊತ್ತಾಗಿರುವ ವಿಚಾರ.

ಮಲೆನಾಡಿನ ಕಾಡಿನಲ್ಲಿಯ ಉಣುಗು ಎಂದು ಕರೆಯಲಾಗುವ ಉಣ್ಣೆಯ ಕಡಿತದಿಂದ ಬರುವ ಕಾಯಿಲೆ ಇದು. ಮಂಗಗಳ ಸಾವಿನೊಂದಿಗೆ ಇದರ ಹರಡುವಿಕೆ ಶುರುವಾಗುವುದರಿಂದ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಪ್ರತಿವರ್ಷವೂ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಹೊತ್ತಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಬೇಸಿಗೆ ಮುಗಿಯುವವರೆಗೆ ಕಾಡುತ್ತದೆ. ಮಳೆಯೊಂದೇ ಇದನ್ನು ದೂರವಿಡಬಲ್ಲ ನೈಸರ್ಗಿಕ ಶಕ್ತಿ. ನವೆಂಬರ್‌ನಿಂದ ಮೇವರೆಗೂ ಯಾವುದೇ ಸಂದರ್ಭದಲ್ಲಿ ಮಲೆನಾಡಿನ ಯಾವುದೇ ಭಾಗದಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದಾದ ಭೀತಿ ಇದ್ದೇ ಇರುತ್ತದೆ. ಇಂಥ ಹೊತ್ತಿನಲ್ಲೇ ಇದನ್ನು ತಡೆಯಲಿಕ್ಕಿರುವ ಒಂದೇ ಒಂದು ದಾರಿಯನ್ನೂ ಇಲ್ಲವಾಗಿಸಿಕೊಂಡು ಕೈಚೆಲ್ಲಿದೆಯೇ ಸರಕಾರ? ಕಳೆದ ಸುಮಾರು 33 ವರ್ಷಗಳಿಂದ ಕೊಡಲಾಗುತ್ತಿದ್ದ ಲಸಿಕೆಯನ್ನು ಏಕೆ ಇದ್ದಕ್ಕಿದ್ದಂತೆ ಒದಗಿಸದಿರುವ ನಡೆಗೆ ಅದು ಮುಂದಾಯಿತು? ಎಂಬ ಪ್ರಶ್ನೆ ಏಳುವಂತಾಗಿದೆ. ಸತ್ಯ ಇರುವುದೇ ಇಲ್ಲಿ. 

‘ಮಿಂಟ್’ ವರದಿಯ ಪ್ರಕಾರ, ಇಂಥದೊಂದು ನಿರ್ಧಾರಕ್ಕೆ ಸರಕಾರ ಬಂದಿರುವುದು ಇದ್ದಕ್ಕಿದ್ದಂತೆ ಅಲ್ಲ. ಕಳೆದೆರಡು ದಶಕಗಳಿಂದಲೇ ಮಂಗನ ಕಾಯಿಲೆ ಲಸಿಕೆಯು ಒಂದೆಡೆ ಕಾನೂನಿನ ಸಮಸ್ಯೆ ಮತ್ತು ಇನ್ನೊಂದೆಡೆಯಿಂದ ಗುಣಮಟ್ಟದ ಸಮಸ್ಯೆಯ ಸುಳಿಯಲ್ಲಿತ್ತು. ಮಾತ್ರವಲ್ಲದೆ, ಭಾರತದ ಮುಖ್ಯ ಔಷಧ ನಿಯಂತ್ರಕವಾದ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ (ಸಿಡಿಎಸ್‌ಸಿಒ) ಈ ಲಸಿಕೆ ತಯಾರಕ ಸಂಸ್ಥೆಯಾದ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಎನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಜಿಕಲ್ಸ್‌ಗೆ 2002ರಿಂದಲೇ ಲಸಿಕೆ ಉತ್ಪಾದಿಸಲು ಅನುಮತಿ ಕೊಟ್ಟಿರಲಿಲ್ಲ. 

ಅಂದರೆ, ಕಳೆದ 21 ವರ್ಷಗಳಿಂದ ಭಾರತದಲ್ಲಿ ಈ ಲಸಿಕೆ ಮಾರಾಟವು ಕಾನೂನು ಬಾಹಿರವಾಗಿತ್ತು. ಯಾವಾಗ, ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಯ ನದರಿನಿಂದಾಚೆ ಈ ಲಸಿಕೆಯ ತಯಾರಿಕೆ ನಡೆಯತೊಡಗಿತೋ ಅಲ್ಲಿಂದ ಅಂದರೆ 20 ವರ್ಷಗಳಿಂದ ಲಸಿಕೆಯ ಗುಣಮಟ್ಟವೂ ಪೂರ್ತಿ ಹದಗೆಟ್ಟಿತ್ತು. ಸಾಮರ್ಥ್ಯ ಪರೀಕ್ಷೆಯಲ್ಲಿ ಮತ್ತೆ ಮತ್ತೆ ಇದು ವಿಫಲವಾಗಿತ್ತು. ಪ್ರಾಣಿಗಳ ಮೇಲೆ ಬಳಸಿ ಅಳೆಯಲಾಗುತ್ತಿದ್ದ ಸಾಮರ್ಥ್ಯವು ಲಸಿಕೆ ಮನುಷ್ಯರಲ್ಲಿ ಕ್ಯಾಸನೂರು ಕಾಯಿಲೆಯನ್ನು ಎಷ್ಟರ ಮಟ್ಟಿಗೆ ತಡೆಯಬಲ್ಲದು ಎಂಬುದನ್ನು ಸೂಚಿಸುತ್ತಿತ್ತು. ಹಾಗಾಗಿ ಸಾಮರ್ಥ್ಯ ಪರೀಕ್ಷೆಯು ಲಸಿಕೆ ಪರಿಣಾಮದ ವಿಚಾರದಲ್ಲಿ ನೇರ ಸಂಬಂಧವಿರುವ ಅಂಶ. ಆದರೆ ಸಾಮರ್ಥ್ಯ ಪರೀಕ್ಷೆಯಲ್ಲಿ ಲಸಿಕೆ ವಿಫಲವಾದರೆ, ಅದು ಮನುಷ್ಯರಲ್ಲಿ ಕೆಎಫ್‌ಡಿ ವಿರುದ್ಧ ರೋಗನಿರೋಧಕ ಶಕ್ತಿಯನ್ನು ತುಂಬಲಾರದು ಎಂದೇ ಅರ್ಥ.

ಈ ಹಿಂದೆ ಲಸಿಕೆಯ ಎರಡು ಡೋಸ್ ಮೂರು ಡೋಸ್ ತೆಗೆದುಕೊಂಡವರಿಗೂ ಮಂಗನ ಕಾಯಿಲೆ ಬಂದೆರಗಿದ ಉದಾಹರಣೆಗಳು ಈಗಾಗಲೇ ಇವೆ. ಹೀಗೇಕೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಗುವಂತಾಗಿದೆ. ಪ್ರತೀ ವರ್ಷವೂ ನಿರಂತರವಾಗಿ ತೆಗೆದುಕೊಂಡರಷ್ಟೇ ರೋಗನಿರೋಧಕ ಶಕ್ತಿ ಬರುತ್ತದೆ ಎಂಬ ಮಾತುಗಳನ್ನು ಆರೋಗ್ಯಾಧಿಕಾರಿಗಳು ಹೇಳಿಕೊಂಡು ಬಂದಿದ್ದರು. 

ಕಳೆದ ವರ್ಷ ಮಂಗನ ಕಾಯಿಲೆಯ ತೀವ್ರತೆ ಕಡಿಮೆಯಾಗಿದ್ದಾಗ ಲಸಿಕೆ ನಿರಂತರ ಬಳಕೆಯ ಪರಿಣಾಮ ಅದೆಂದು ನಂಬುವಂತಾಗಿತ್ತು ಅಥವಾ ಬಿಂಬಿಸಲಾಗಿತ್ತು. ಮಂಗನ ಕಾಯಿಲೆಯಿಂದಾಗಿ ಯಾರೂ ಪ್ರಾಣ ಕಳೆದುಕೊಳ್ಳಲಿಲ್ಲವೆಂಬುದೂ 2021ರಲ್ಲಿ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದ್ದ ಸಂಗತಿಯೇ. ದಶಕಗಳ ನಂತರ ಇಂಥದೊಂದು ಸಮಾಧಾನ ಮಲೆನಾಡಿನ ಪಾಲಿಗಿತ್ತು. ಆದರೆ ಮತ್ತೆ ಈ ವರ್ಷದ ಆರಂಭದಲ್ಲೇ ಮಂಗನ ಕಾಯಿಲೆಯ ಪ್ರಕರಣಗಳು ಪತ್ತೆಯಾಗಿದ್ದವು. ಮತ್ತೆ ಆತಂಕ ಮೂಡಿತ್ತು.

ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಕರಾಳ ರೂಪದಲ್ಲಿ ಕಾಣಿಸಿಕೊಂಡದ್ದು 2019ರಲ್ಲಿ. 350ರಷ್ಟು ಪ್ರಕರಣಗಳು ಪತ್ತೆಯಾಗಿದ್ದವು. 2020ರಲ್ಲಿಯೂ ಪ್ರಕರಣಗಳು ಅಷ್ಟೇನೂ ಇಳಿಮುಖವಾಗಿರಲಿಲ್ಲ. ಆ ವರ್ಷ ಹತ್ತಿರ ಹತ್ತಿರ 200 ಪ್ರಕರಣಗಳು ಕಾಣಿಸಿಕೊಂಡಿದ್ದವು. ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವ್ರವಾಗಿ ಬಾಧಿಸುವ ಪ್ರದೇಶಗಳೆಂದರೆ, ತೀರ್ಥಹಳ್ಳಿಯ ಕೋಣಂದೂರು, ಯೋಗಿಮಳಲಿ, ಹುಂಚದಕಟ್ಟೆ, ಕುಡುಮಲ್ಲಿಗೆ, ಚಿಡುವ, ಕಟಗಾರು, ಮಾಳೂರು, ಕನ್ನಂಗಿ, ಕುಕ್ಕೆ, ತನಿಕಲ್ಲು, ಮಂಡಗದ್ದೆ, ತಳವೆ, ಸಿಂಗನಬಿದರೆ. ಕೋವಿಡ್‌ಗಿಂತ ಗಂಭೀರ ಕಾಯಿಲೆಯೊಂದರ ವಿಚಾರದಲ್ಲಿ - ಕಾಯಿಲೆ ಹರಡುತ್ತಿರುವ ಹೊತ್ತಲ್ಲಿನ ತಾತ್ಕಾಲಿಕ ಕ್ರಮಗಳನ್ನು ಬಿಟ್ಟರೆ ನಮ್ಮ ಸರಕಾರಗಳು ಎಷ್ಟು ನಿರ್ಲಿಪ್ತವಾಗಿವೆಯಲ್ಲ ಎಂಬುದೇ ಭಯ ಹುಟ್ಟಿಸುತ್ತದೆ.

 66 ವರ್ಷಗಳ ಹಿಂದೆ

ಮಂಗನ ಕಾಯಿಲೆ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 1956ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ. ಹಾಗಾಗಿಯೇ ಅದೇ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತದೆ. ಕಾಡಿನಲ್ಲಿ ಮಂಗಗಳು ಸಾಯುವುದು ಈ ಕಾಯಿಲೆಯ ಸೂಚನೆ. ಉಣುಗುಗಳ ಕಡಿತದಿಂದ ಮಾತ್ರವೇ ಬರುವ ಈ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ತೀವ್ರತೆ ಕಡಿಮೆಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಇನ್ನಾವುದೋ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ವ್ಯಾಪಿಸಿಬಿಡುವುದು ಈ ಕಾಯಿಲೆಯ ಕರಾಳತೆ. 

ಮಲೆನಾಡು ಭಾಗದ ಕೃಷಿಕರು ಇಲ್ಲವೆ ಕಾಡಿನ ಇತರ ಕೆಲಸಗಾರರು ಈ ಸೋಂಕಿಗೆ ಒಳಗಾಗುವುದು ಹೆಚ್ಚು. ಜಾನುವಾರುಗಳು ಮೇವಿಗಾಗಿ ಕಾಡಿಗೆ ಹೋಗುವುದರಿಂದ ಅವುಗಳ ಮೈಗಂಟಿಕೊಂಡ ಉಣ್ಣೆಗಳು ಕೊಟ್ಟಿಗೆಯವರೆಗೂ ತಲುಪಿ ಕೃಷಿಕರಿಗೆ ಅಪಾಯ ತಂದೊಡ್ಡುವುದುಂಟು. ಮೊದಲು ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಿಗಷ್ಟೇ ಸಿಮಿತವಾಗಿದ್ದ ಮಂಗನ ಕಾಯಿಲೆ ಕ್ರಮೇಣ ಸುಮಾರು 12 ಜಿಲ್ಲೆಗಳಿಗೆ ವ್ಯಾಪಿಸಿತು. 

ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಮೈಸೂರು, ಚಾಮರಾಜನಗರಗಳಲ್ಲೂ ಬಂದಿರುವುದಿದೆ. ಈಗೀಗ ಗದಗ, ಹಾವೇರಿ, ಬೆಳಗಾವಿಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಗೋವಾ, ಮಹಾರಾಷ್ಟ್ರ, ಕೇರಳದ ಕೆಲವೆಡೆಗಳಲ್ಲೂ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗುತ್ತಿವೆ.

ಮಂಗನ ಕಾಯಿಲೆ ಸಂಬಂಧ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸುವ ಮಾತು ಕೂಡ ನನೆಗುದಿಗೆ ಬಿದ್ದಿದೆ. ಸಾಗರದಲ್ಲಿ ಸಂಶೋಧನಾ ಕೇಂದ್ರವಾಗಬೇಕೆಂಬ ಒತ್ತಾಯ ಕೇಳಿಬಂದಿತ್ತಾದರೂ ಅದಕ್ಕೆ ಅಧಿಕಾರಿಗಳು ಅಡ್ಡಗಾಲಾಗಿದ್ದಾರೆ ಎಂಬ ಆರೋಪಗಳಿವೆ. ಜೀವ ಹಿಂಡುವ ಮಂಗನ ಕಾಯಿಲೆಯಿಂದಾಗಿ ಜನರು ಸಂಕಟಪಡುವುದು, ಬಲಿಯಾಗುವುದು ಮಾತ್ರ ತಪ್ಪಿಲ್ಲ.

ಇಲ್ಲಿಯೂ ಇದೆ ಲೆಕ್ಕಾಚಾರ!

ಕೋವಿಡ್ ವಕ್ಕರಿಸಿದಾಗ ಅದಕ್ಕೆ ಎಷ್ಟೊಂದು ತ್ವರಿತ ಗತಿಯಲ್ಲಿ ಲಸಿಕೆ ಕಂಡುಕೊಳ್ಳಲಾಯಿತು ಎಂಬುದನ್ನು ಗಮನಿಸಿದರೆ, ಕಳೆದ ಆರೂವರೆ ದಶಕಗಳಿಂದ ಕಾಡುತ್ತಿರುವ ಮಂಗನ ಕಾಯಿಲೆಗೆ ತಕ್ಕ ಲಸಿಕೆ ಕಂಡುಕೊಳ್ಳುವಲ್ಲಿ, ಔಷಧ ಕಂಡುಹಿಡಿಯುವಲ್ಲಿ ಸರಕಾರಗಳಿಗೇಕೆ ಇಚ್ಛಾಶಕ್ತಿ ಇಲ್ಲ? ಎಂಬ ಪ್ರಶ್ನೆ ಕಾಡದೇ ಇರದು.

ಇದು ಮಲೆನಾಡಿಗಷ್ಟೇ ಸೀಮಿತವಾಗಿರುವ ಕಾಯಿಲೆ. ಚಳಿಗಾಲ ಮತ್ತು ಬೇಸಿಗೆಕಾಲದಲ್ಲಿ ಮಾತ್ರವೇ ಕಾಡುವ ಕಾಯಿಲೆ. ಸೀಮಿತ ಪ್ರದೇಶ ಮತ್ತು ವರ್ಷದಲ್ಲಿ ಸೀಮಿತ ಅವಧಿಯ ವ್ಯಾಪ್ತಿಯಲ್ಲಷ್ಟೇ ಕಾಣಿಸಿಕೊಳ್ಳುವ ಈ ಕಾಯಿಲೆಗೆ ಲಸಿಕೆ ತಯಾರಿಕೆ ಲಾಭದಾಯಕವಲ್ಲ ಎಂಬ ಲೆಕ್ಕಾಚಾರ ಇಲ್ಲದೇ ಇಲ್ಲ.

ಈಚೆಗೆ ಇದು ಬೇರೆಡೆಗೂ ಪಸರಿಸುತ್ತದಾದರೂ ಅದನ್ನು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಸರಕಾರ ಪ್ರತೀ ವರ್ಷವೂ ಈ ಕಾಯಿಲೆ ಹರಡದಂತೆ ತಡೆಯಲು ಕೈಗೊಳ್ಳುವ ಕ್ರಮಗಳಿಗಾಗಿ ಸಾಕಷ್ಟು ಹಣ ವ್ಯಯಿಸುತ್ತದಾದರೂ ಇದನ್ನು ನಿರ್ಮೂಲನಗೊಳಿಸಬಲ್ಲ ದಿಸೆಯಲ್ಲಿನ ಪ್ರಯತ್ನಕ್ಕೆ ಮಾತ್ರ ಮನಸ್ಸು ಮಾಡುವುದಿಲ್ಲ.

Similar News