ಕೊನೆಯಾಗದ ಬಾಲಕಾರ್ಮಿಕ ಪದ್ಧತಿ
ಬಾಲಕಾರ್ಮಿಕ ಪದ್ಧತಿಯ ವಿನಾಶವಾಗಬೇಕಾದರೆ ಬಡತನ ನಿರ್ಮೂಲನ ಆಗಬೇಕು. ಬಡತನ ನಿರ್ಮೂಲನವಾಗಬೇಕಾದರೆ ಅಸಮಾನತೆ ಕೊನೆಗಾಣಬೇಕು. ಬಡತನ ಮತ್ತು ಅಸಮಾನತೆಯನ್ನು ನಿರ್ಮೂಲನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಬಡತನದ ಪ್ರಮಾಣ ಕಳೆದ ವರ್ಷಗಳಿಂದೀಚೆಗೆ ಅಲ್ಪಪ್ರಮಾಣದಲ್ಲಿ ಕಡಿಮೆಯಾದಂತೆ ಭಾಸವಾಗುತ್ತಿದ್ದರೂ ಅಸಮಾನತೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಹೆಚ್ಚುತ್ತಿರುವ ನಿರುದ್ಯೋಗದ ಪ್ರಮಾಣ ಕೂಡ ಬಾಲಕಾರ್ಮಿಕ ಪದ್ಧತಿಗೆ ಕಾರಣವಾಗಿದೆ.
ಮಕ್ಕಳು ದೇವರಿಗೆ ಸಮ ಎಂದು ಹೇಳಲಾಗುತ್ತದೆ. ಆದರೆ ಜಗತ್ತಿನಾದ್ಯಂತ 70 ಮಿಲಿಯನ್‌ಗೂ ಹೆಚ್ಚು ಮಕ್ಕಳು ಕೃಷಿ, ಗಣಿಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಮಕ್ಕಳ ಬಾಲ್ಯ, ಸಾಮರ್ಥ್ಯ ಮತ್ತು ಘನತೆಯನ್ನು ಬಾಲಕಾರ್ಮಿಕ ಪದ್ಧತಿ ಹಾಳು ಮಾಡುವುದಲ್ಲದೆ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ಕುಗ್ಗುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಬಾಲಕಾರ್ಮಿಕ ಪದ್ಧತಿ ಶಾಲೆಯಿಂದ ಹೊರಗುಳಿಯುವುದು ಸೇರಿದಂತೆ ಮಕ್ಕಳ ಬಾಲ್ಯ ಜೀವನದ ಸೊಬಗನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 10.1 ಮಿಲಿಯನ್ ಬಾಲಕಾರ್ಮಿಕರಿದ್ದರು. ಈ ಪೈಕಿ 5.6 ಮಿಲಿಯನ್ ಬಾಲಕರಾದರೆ 4.5 ಮಿಲಿಯನ್ ಬಾಲಕಿಯರಾಗಿದ್ದಾರೆ. ಆ ಮೂಲಕ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿ ಹೆಚ್ಚು ಬಾಲಕಾರ್ಮಿಕರು ಕಂಡು ಬರುತ್ತಾರೆ. ಬಾಲಕಾರ್ಮಿಕ ಪದ್ಧತಿ ಕೇವಲ ಒಂದು ದೇಶಕ್ಕೆ ಸೀಮಿತವಾಗಿರದೆ ಜಾಗತಿಕ ಸಮಸ್ಯೆಯಾಗಿದ್ದು ಮುಖ್ಯವಾಗಿ ಅಭಿವೃದ್ಧ್ದಿಶೀಲ ರಾಷ್ಟ್ರಗಳ ಪ್ರಮುಖ ಸಮಸ್ಯೆಯಾಗಿದೆ. ಮಕ್ಕಳನ್ನು ಮನೆಗೆಲಸಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ಮೊದಲಿನಿಂದ ಇತ್ತಾದರೂ ಇತ್ತೀಚೆಗೆ ಹೆಚ್ಚು ವ್ಯಾಪಕವಾಗುತ್ತಿದ್ದು ಇದರಿಂದಾಗಿ ಮಕ್ಕಳ ಮೇಲೆ ದೈಹಿಕ, ಲೈಂಗಿಕ ಮತ್ತು ಭಾವನಾತ್ಮಕ ದೌರ್ಜನ್ಯಗಳು ಹೆಚ್ಚಾಗಲು ಕಾರಣವಾಗಿದೆ. ಮನೆಗೆಲಸದ ಜೊತೆಗೆ ಹೋಟೆಲ್, ದಾಬಾಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ದೂಡಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಬಾಲಕಾರ್ಮಿಕ ಪದ್ಧತಿ ಕಡಿಮೆಯಾಗುತ್ತಿದ್ದರೂ ಜೀತ ಬಾಲ ಕಾರ್ಮಿಕ ಪದ್ಧತಿ ಮುಂದುವರಿದೇ ಇದೆ. ಇಟ್ಟಿಗೆ ತಯಾರಿಕೆ, ಗಾರ್ಮೆಂಟ್ಸ್, ಮನೆ ಕೆಲಸ, ಕೃಷಿ, ಮೀನುಗಾರಿಕೆ, ಗಣಿಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. 2011ರ ಜನಗಣತಿಯ ಪ್ರಕಾರ ಶೇ.32.9ರಷ್ಟು ಮಕ್ಕಳು ಕೃಷಿಯಲ್ಲಿ ತೊಡಗಿದ್ದರೆ, ಮನೆಕೆಲಸ ಮತ್ತು ಕೈಗಾರಿಕೆಗಳಲ್ಲಿ ಶೇ.5.2ರಷ್ಟು ಮಕ್ಕಳು ಕೆಲಸ ಮಾಡುತ್ತಿದ್ದರು. ಇತರ ಕ್ಷೇತ್ರಗಳಲ್ಲಿ ಶೇ.35.8ರಷ್ಟು ಮಕ್ಕಳು ತೊಡಗಿದ್ದರು.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್, ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು ಮತ್ತು ಅವರನ್ನು ಮನೆಕೆಲಸದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಬಾಲಕಾರ್ಮಿಕ ಪದ್ಧತಿಯ ಕಾರಣದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಜೊತೆಗೆ ಅಪೌಷ್ಟಿಕತೆ, ಮಾದಕವಸ್ತು ಸೇವನೆ ಮತ್ತು ಖಿನ್ನತೆಯಂತಹ ಪರಿಸ್ಥಿತಿಗೆ ಒಳಗಾಗುತ್ತಾರೆ. ಮಕ್ಕಳ ಕಳ್ಳ ಸಾಗಣೆಯೂ ಬಾಲಕಾರ್ಮಿಕ ಪದ್ಧತಿಗೆ ಕೊಡುಗೆ ನೀಡಿದೆೆ. ಕಳ್ಳಸಾಗಣೆಗೆ ಒಳಗಾದ ಮಕ್ಕಳನ್ನು ಹೆಚ್ಚಾಗಿ ಮನೆಕೆಲಸಕ್ಕೆ, ಭಿಕ್ಷಾಟನೆಗೆ ಮತ್ತು ವೇಶ್ಯಾವಾಟಿಕೆಗೆ ದೂಡಲಾಗುತ್ತದೆ.
ಇದರಿಂದಾಗಿ ಮಕ್ಕಳು ದೈಹಿಕ, ಮಾನಸಿಕ, ಲೈಂಗಿಕ ಮತ್ತು ಭಾವನಾತ್ಮಕ ಸೇರಿದಂತೆ ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಒಳಗಾಗುವುದಕ್ಕೆ ಎಡೆ ಮಾಡಿಕೊಡುತ್ತದೆ. ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯನ್ನೂ ಅವಲಂಬಿಸಿದೆ. ಕಳಪೆ ಹಣಕಾಸು ಪರಿಸ್ಥಿತಿಯಿಂದಾಗಿ ಜನರು ಜಮೀನ್ದಾರರು ಮತ್ತು ಲೇವಾದೇವಿದಾರರಿಂದ ಸಾಲ ಪಡೆಯುತ್ತಾರೆ. ಹಗಲಿರುಳು ದುಡಿದರೂ ಸಾಲ ಮರುಪಾವತಿಸಲು ಸಾಧ್ಯವಾಗದಿದ್ದಾಗ ತಮ್ಮ ಮಕ್ಕಳನ್ನು ಕೆಲಸಕ್ಕೆ ಅನಿವಾರ್ಯವಾಗಿ ತಳ್ಳುತ್ತಾರೆ. ಭಾರತದ ಸಂವಿಧಾನದ 23 ಮತ್ತು 24ನೇ ವಿಧಿಯು ಎಲ್ಲಾ ರೀತಿಯ ಶೋಷಣೆಗಳ ವಿರುದ್ಧ ಹಕ್ಕುಗಳನ್ನು ಒದಗಿಸಿದೆ. ಮಕ್ಕಳು ತಾವು ಕೆಲಸ ಮಾಡುವ ಸ್ಥಳದಲ್ಲಿ ಅನೇಕ ಅಪಾಯದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ.
ಬಾಲಕಾರ್ಮಿಕ ಪದ್ಧತಿಯ ವಿನಾಶವಾಗಬೇಕಾದರೆ ಬಡತನ ನಿರ್ಮೂಲನ ಆಗಬೇಕು. ಬಡತನ ನಿರ್ಮೂಲನವಾಗಬೇಕಾದರೆ ಅಸಮಾನತೆ ಕೊನೆಗಾಣಬೇಕು. ಬಡತನ ಮತ್ತು ಅಸಮಾನತೆಯನ್ನು ನಿರ್ಮೂಲನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಬಡತನದ ಪ್ರಮಾಣ ಕಳೆದ ವರ್ಷಗಳಿಂದೀಚೆಗೆ ಅಲ್ಪಪ್ರಮಾಣದಲ್ಲಿ ಕಡಿಮೆಯಾದಂತೆ ಭಾಸವಾಗುತ್ತಿದ್ದರೂ ಅಸಮಾನತೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಹೆಚ್ಚುತ್ತಿರುವ ನಿರುದ್ಯೋಗದ ಪ್ರಮಾಣ ಕೂಡ ಬಾಲಕಾರ್ಮಿಕ ಪದ್ಧತಿಗೆ ಕಾರಣವಾಗಿದೆ. ಬಡತನ ಮತ್ತು ಆರ್ಥಿಕ ಅಸಮಾನತೆಗಳ ಪರಿಣಾಮದಿಂದಾಗಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಪ್ರಸಕ್ತ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ವಿಶ್ವದ 121 ದೇಶಗಳ ಪೈಕಿ ಭಾರತ 107ನೇ ಸ್ಥಾನಕ್ಕೆ ಬಂದು ನಿಂತಿದೆ. 2020ರಲ್ಲಿ ಭಾರತ 101ನೇ ಸ್ಥಾನದಲ್ಲಿತ್ತು. ಈ ವರ್ಷ ಅದಕ್ಕಿಂತ ಕೆಳಮಟ್ಟಕ್ಕೆ ಕುಸಿದಿದೆ. ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗುತ್ತಿರುವುದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಶೇ.19.3ರಷ್ಟಿದ್ದು ಇದೂ ಕೂಡ ಅತ್ಯಧಿಕವಾಗಿದೆ. ಭಾರತದಲ್ಲಿ ಪ್ರತೀ ವರ್ಷ 5 ವರ್ಷದ ಒಳಗಿನ 1.4 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆ. 61 ದಶಲಕ್ಷ ಮಕ್ಕಳು ಸೇರಿದಂತೆ 200 ದಶಲಕ್ಷಕ್ಕೂ ಹೆಚ್ಚು ಜನರಿಗೆ ದಿನನಿತ್ಯದ ಆಹಾರವೇ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನದಲ್ಲಿ ಶಿಕ್ಷಕರು ಮಹತ್ವದ ಭೂಮಿಕೆಯನ್ನು ನಿರ್ವಹಿಸಲು ಅವಕಾಶಗಳಿವೆ.
ಶಿಕ್ಷಕರು ಮನಸ್ಸು ಮಾಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ಕಡಿಮೆ ಮಾಡಬಹುದು. ಉಚಿತ ಮತ್ತು ಕಡ್ಡಾಯ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡುವುದನ್ನು ದೃಢೀಕರಿಸುತ್ತದೆ. ಮಕ್ಕಳ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-2000ದ ಅನ್ವಯ ಯಾವುದೇ ವ್ಯಕ್ತಿಯು ಅಪಾಯಕಾರಿ ಕೆಲಸಗಳಿಗೆ ಮಕ್ಕಳನ್ನು ನೇಮಿಸಿಕೊಂಡರೆ ಅಥವಾ ಮಕ್ಕಳನ್ನು ಬಂಧಿತ ಕಾರ್ಮಿಕರಂತೆ ಬಳಸಿಕೊಂಡರೆ ಶಿಕ್ಷಾರ್ಹ ಅಪರಾಧವಾಗುತ್ತದೆ.
1979ರಲ್ಲಿ ಮೊದಲ ಬಾರಿಗೆ ಬಾಲಕಾರ್ಮಿಕ ಪದ್ಧತಿಯ ಕುರಿತು ಅಧ್ಯಯನ ಮಾಡಿ ಅದರ ನಿರ್ಮೂಲನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಗುರುಪಾದಸ್ವಾಮಿ ಸಮಿತಿಯನ್ನು ಸರಕಾರ ನೇಮಿಸಿತು. ಈ ಸಮಿತಿಯು ನೀಡಿದ ಶಿಫಾರಸುಗಳ ಆಧಾರದ ಮೇಲೆ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986ನ್ನು ಸರಕಾರ ಜಾರಿಗೆ ತಂದಿತು. 1987ರಲ್ಲಿ ಬಾಲಕಾರ್ಮಿಕರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೆ ತರಲಾಯಿತು.
ರಾಷ್ಟ್ರೀಯ ಬಾಲಕಾರ್ಮಿಕ ನೀತಿಯನ್ನು 1988ರಲ್ಲಿ ಆರಂಭಿಸಲಾಯಿತು. ಇದರ ಪ್ರಮುಖ ಉದ್ದೇಶ ಅಪಾಯಕಾರಿ ಕೆಲಸದಲ್ಲಿ ತೊಡಗಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದಾಗಿತ್ತು. ನಂತರ 2016ರಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಡಿಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಈ ಕಾನೂನುಗಳಲ್ಲದೆ ಗಣಿ ಕಾಯ್ದೆ-1952ರ ಅನ್ವಯ ಗಣಿಗಾರಿಕೆಗೆ ಮಕ್ಕಳನ್ನು ತೊಡಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
ಅಪ್ರೆಂಟಿಸ್ ಕಾಯ್ದೆ-1961ರ ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ರೀತಿಯ ಅಪ್ರೆಂಟಿಸ್ ತರಬೇತಿಗೆ ತೆಗೆದುಕೊಳ್ಳುವುದನ್ನು ನಿಷೇಧಿಸುತ್ತದೆ. ಭಾರತೀಯ ಕಾರ್ಖಾನೆಗಳ ಕಾಯ್ದೆ-1948ರ ಅನ್ವಯ 14 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ಉದ್ಯೋಗಗಳಿಗೆ ನೇಮಿಸಿಕೊಳ್ಳಬಾರದೆಂಬ ನಿಯಮವನ್ನು ಹೊಂದಿದೆ. ಸರಕಾರ ಬಾಲಕಾರ್ಮಿಕ ಪದ್ಧತಿಯನ್ನು ತೊಲಗಿಸಲು ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅರಿವಿನ ಕೊರತೆ, ಬಡತನ, ಅಧಿಕಾರಿಗಳ ಅಸಮರ್ಥತೆಯ ಕಾರಣಗಳಿಂದಾಗಿ ಈ ಕಾನೂನುಗಳು ಅನುಷ್ಠಾನದ ಹಂತದಲ್ಲಿಯೇ ಸೋಲುತ್ತಿವೆ.
ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ ಪ್ರಕಾರ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು. ಮಕ್ಕಳು ದೇಶದ ಸಂಪತ್ತು. ಈ ಸಂಪತ್ತನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಮಕ್ಕಳ ಕುರಿತಾದ ನಮ್ಮ ಮನೋಭಾವಗಳು ಬದಲಾಗಬೇಕಾಗಿದೆ. ಮಕ್ಕಳ ಹಕ್ಕುಗಳನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ.