ಗುಜರಾತ್‌ನ ಹಿರಿಯ ಬಿಜೆಪಿ ನಾಯಕ ಜಯ್ ನಾರಾಯಣ ವ್ಯಾಸ್ ರಾಜೀನಾಮೆ

Update: 2022-11-05 07:39 GMT

ಅಹಮದಾಬಾದ್: ಗುಜರಾತ್‌ನ ಹಿರಿಯ ಬಿಜೆಪಿ ನಾಯಕ ಹಾಗೂ  ರಾಜ್ಯದ ಮಾಜಿ ಆರೋಗ್ಯಸಚಿವ ಜಯ್ ನಾರಾಯಣ ವ್ಯಾಸ್ Veteran Gujarat BJP leader Jay Narayan Vyas ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರುವ ಬಗ್ಗೆ ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಶನಿವಾರ ಅಹಮದಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವ್ಯಾಸ್, "ನಾನು ಯಾವಾಗಲೂ ದೂರುದಾರನ ಪಾತ್ರದಲ್ಲಿ ಉಳಿಯಬೇಕಾದ ಪರಿಸ್ಥಿತಿ ಬಂದಿತ್ತು. ಇಷ್ಟು ಹಿರಿತನವಿದ್ದರೂ ನೋವು ತಂದಿತ್ತು. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ'' ಎಂದು ಹೇಳಿದರು.

ತಾವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿರುವ ವ್ಯಾಸ್, ಕಾಂಗ್ರೆಸ್ ಅಥವಾ ಎಎಪಿ ಸೇರಲು ತಮಗೆ ಎರಡು ಆಯ್ಕೆಗಳಿದ್ದು, ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸುವುದಾಗಿ ಹೇಳಿದ್ದಾರೆ.

ಪಟಾನ್ ಜಿಲ್ಲೆಯ ಸಿಧ್‌ಪುರ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದ ವ್ಯಾಸ್, ಬಿಜೆಪಿಯ ಜಿಲ್ಲಾ ಘಟಕದ ವಿರುದ್ಧ ಆರೋಪಿಸಿದ್ದರು. ಕೆಲವು ಜನರು ಜಿಲ್ಲೆಯ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.

ಅನೇಕ ಸಮೀಕ್ಷೆಗಳು ತನ್ನನ್ನು  ಸಿಧ್‌ಪುರ ಕ್ಷೇತ್ರಕ್ಕೆ ಅತ್ಯಂತ ಜನಪ್ರಿಯ ಅಭ್ಯರ್ಥಿ ಎಂದು ತೋರಿಸಿವೆ ಎಂದಿರುವ ವ್ಯಾಸ್ ಅವರು ಈ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿದ್ದಾರೆ.  ನಾಲ್ಕು ಬಾರಿ ಗೆದ್ದಿದ್ದಾರೆ. 2017ರಲ್ಲಿ ಸೀಟು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Similar News