×
Ad

ಪಕ್ಷದ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸಿ: ಸಚಿವ ಅಂಗಾರ

ಬಿಜೆಪಿಯ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸಭೆ

Update: 2022-11-05 19:35 IST

ಉಡುಪಿ : ಬಿಜೆಪಿಯ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿಯ ಪರ್ವಕಾಲ ವನ್ನು ಕಾಣುತ್ತಿದೆ. ಇದರಿಂದ ಹತಾಶರಾಗಿ ರುವ ವಿರೋಧಪಕ್ಷಗಳು ಸಲ್ಲದ ಟೀಕೆಗಳನ್ನು ಮಾಡುತ್ತಿವೆ. ಹೀಗಾಗಿ ಮುಂದಿನ ಚುನಾವಣೆಯನ್ನು ಎಚ್ಚರಿಕೆ ಯಿಂದ ಎದುರಿಸಬೇಕಾಗಿರುವ ನಾವು ಪಕ್ಷ ಕೊಟ್ಟ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಹಾಗೂ ಒಳನಾಡ ಜಲಸಾರಿಗೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಶನಿವಾರ ಮಣಿಪಾಲದಲ್ಲಿರುವ ಕಂಟ್ರಿ ಇನ್ ಹೊಟೇಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ಜಿಲ್ಲಾ ವಿಶೇಷ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪಕ್ಷವನ್ನು ಜಿಲ್ಲಾ ಮಟ್ಟದಲ್ಲಿ ಬಲಿಷ್ಠವಾಗಿ ಕಟ್ಟುವ ಮೂಲಕ ಮುಂದಿನ ಚುನಾವಣೆಯಲ್ಲೂ ಜಿಲ್ಲೆಯ ಎಲ್ಲಾ ಐದು ಸ್ಥಾನಗಳನ್ನು ಗೆಲ್ಲಲು ಪಕ್ಷದ ಪ್ರತಿ ಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದ ಸಚಿವರು, ಜನರು ದೇಶ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಜನರ ನಿರೀಕ್ಷೆಯನ್ನು ಮುಟ್ಟಬೇಕು ಎಂದರು.

ಮುಂದಿನ ಚುನಾವಣೆಯ ವೇಳೆಗೆ ನಾವು ಎಲ್ಲಾ ಸ್ತರಗಳಲ್ಲೂ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಇಲ್ಲಿ ನಿಮಗೆ ನೀಡುವ ಎಲ್ಲಾ ಮಾಹಿತಿಗಳನ್ನು ಕಾರ್ಯಕರ್ತರ ಮೂಲರ ಮನೆ-ಮನೆಗೆ ತಲುಪಿಸಿ ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿ ಜಯಗಳಿಸುವಂತೆ ಹಾಗೂ ರಾಜ್ಯದಲ್ಲಿ ಪಕ್ಷದ ನಿರೀಕ್ಷೆಯ ೧೫೦ ಸೀಟುಗಳನ್ನು ಗೆಲ್ಲುವಂತೆ ಶ್ರಮಿಸಬೇಕು ಎಂದು ಅಂಗಾರ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷ ಚುನಾವಣೆಗಾಗಿ ಈವರೆಗೆ ನಡೆಸಿದ ಪೂರ್ವಭಾವಿ ಸಿದ್ಧತೆಗಳ ವಿವರಗಳನ್ನು ನೀಡಿದರು. ಜಿಲ್ಲಾ ತಂಡಗಳು ಈಗಾಗಲೇ ಬೈಂದೂರು ಮತ್ತು ಕುಂದಾಪುರ ಕ್ಷೇತ್ರಗಳ ಶಕ್ತಿಕೇಂದ್ರಗಳ ಸಭೆಯನ್ನು ಪೂರ್ಣಗೊಳಿಸಿದ್ದು, ಕಾಪುನಲ್ಲಿ ಶೇ.೭೦ರಷ್ಟು ಮುಗಿದಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಉಡುಪಿ ದಕ್ಷಿಣ ಕನ್ನಡ ಬಿಜೆಪಿ ಪ್ರಭಾರಿ ಉದಯ್‌ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ ಕಲ್ಮಾಡಿ, ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ಕಿಶೋರ್‌ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Similar News