ದೇಶದ್ರೋಹದ ಕಾನೂನು ಅಮಾನತುಗೊಳಿಸಿದ ಸುಪ್ರೀಂ ನಿರ್ಧಾರ ಹತಾಶೆ ಉಂಟು ಮಾಡಿದೆ: ಕಿರಣ್ ರಿಜಿಜು

Update: 2022-11-05 16:21 GMT

ಡೆಹ್ರಾಡೂನ್, ನ. 5: ದೇಶದ್ರೋಹದ ಕಾನೂನನ್ನು ಅಮಾನತಿನಲ್ಲಿರಿಸುವ ಸುಪ್ರೀಂ ಕೋರ್ಟ್ ನ (Supreme Court's)  ನಿರ್ಧಾರ ತನಗೆ ತೀವ್ರ ಹತಾಶೆ ಉಂಟು ಮಾಡಿದೆ ಎಂದು ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವ ಕಿರಣ್ ರಿಜಿಜು(Kiran Rijiju) ಅವರು ಶುಕ್ರವಾರ ಹೇಳಿದ್ದಾರೆ.

ಅವರು ಮುಂಬೈಯಲ್ಲಿ ನಡೆದ ‘ಇಂಡಿಯಾ ಟುಡೆ’(India Today) ಸಮಾವೇಶದಲ್ಲಿ ಮಾತನಾಡಿದರು.

ಕೊಲೀಜಿಯಂ ವ್ಯವಸ್ಥೆಯನ್ನು ಟೀಕಿಸಿದ ಅವರು ಅದನ್ನು  ಅಪಾರದರ್ಶಕ ಎಂದು ವ್ಯಾಖ್ಯಾನಿಸಿದರು. ಅಲ್ಲದೆ, ಕೇಂದ್ರ ಸರಕಾರ ಪ್ರಕರಣಗಳು ಬಾಕಿ ಆಗುತ್ತಿರುವುದನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ ಎಂದರು.

‘‘ದೇಶದ್ರೋಹದ ಕಾನೂನಿನ ನಿಯಮಗಳನ್ನು ಬದಲಾಯಿಸುವ ಕುರಿತು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ನಾವು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದೆವು. ಅದರ ಹೊರತಾಗಿಯೂ ಸುಪ್ರೀಂ ಕೋರ್ಟ್ ಈ ಕಾನೂನಿನ ನಿಯಮವನ್ನು ಅಮಾನತಿನಲ್ಲಿರಿಸಿದೆ. ಇದರಿಂದ ನಾನು ತೀವ್ರ ಹತಾಶನಾಗಿದ್ದೇನೆ’’ ಎಂದು ಅವರು ಹೇಳಿದರು. 

‘‘ದೇಶದ್ರೋಹದ ಕಾನೂನನ್ನು ಆದಷ್ಟು ಬೇಗ ಪುನರ್ಪರಿಶೀಲಿಸುವ ತನ್ನ ಉದ್ದೇಶವನ್ನು ಕೇಂದ್ರ ಸರಕಾರ ತಿಳಿಸಿದ ಹೊರತಾಗಿಯೂ ಆದೇಶ ಜಾರಿ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಲಕ್ಷ್ಮಣ ರೇಖೆ ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ಲಕ್ಷ್ಮಣ ರೇಖೆಯನ್ನು ದಾಟಬಾರದು’’ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ದೇಶದ್ರೋಹದ ಕಾನೂನನ್ನು ಮೇ 11ರಂದು ಅಮಾನತಿನಲ್ಲಿ ಇರಿಸಿತ್ತು. ಅಲ್ಲದೆ, ಮರು ಪರಿಶೀಲಿಸುವ ವರೆಗೆ ಈ ಕಾನೂನಿನ ಅಡಿಯಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. 

Similar News