ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾದ ಲೋಕಸಭಾ ಸ್ಥಾನಕ್ಕೆ ಡಿ. 5ರಂದು ಉಪ ಚುನಾವಣೆ

Update: 2022-11-05 16:27 GMT

ಲಕ್ನೊ (ಉ.ಪ.), ನ. 5: ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ (Mulayam Singh Yadav)ಅವರು ನಿಧನರಾದ ಬಳಿಕ ತೆರವಾದ ಮೈನಪುರಿ ಲೋಕಸಭಾ (Mainpuri Lok Sabha)ಸ್ಥಾನಕ್ಕೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ದೀರ್ಘಕಾಲೀನ ಅನಾರೋಗ್ಯದ ಬಳಿಕ ಅಕ್ಟೋಬರ್ 10ರಂದು ಮುಲಾಯಂ ಸಿಂಗ್ ಯಾದವ್ ಅವರು ನಿಧನರಾಗಿದ್ದರು.

ಒಡಿಶಾದ ಪಾದಂಪುರ, ರಾಜಸ್ಥಾನದ ಸರ್ದಾರ್ಶಹರ್, ಬಿಹಾರದ ಕುರ್ಖಾನಿ, ಚತ್ತೀಸ್ಗಡದ ಭಾನುಪ್ರತಾಪ್ಪುರ ಹಾಗೂ ಉತ್ತರಪ್ರದೇಶದ ರಾಮ್ಪುರ ವಿಧಾನ ಸಭಾ ಕ್ಷೇತ್ರಗಳಿಗೆ ಕೂಡ ಚುನಾವಣೆ ನಡೆಯಲಿದೆ.

ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅನರ್ಹಗೊಂಡ ಬಳಿಕ ಉತ್ತರಪ್ರದೇಶದ ರಾಮ್ಪುರ ವಿಧಾನ ಸಭಾ ಸ್ಥಾನ ತೆರವಾಗಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕುರಿತು 2019ರಲ್ಲಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಅವರು ದೋಷಿ ಎಂದು ನ್ಯಾಯಾಲಯ ಪರಿಗಣಿಸಿತ್ತು.

ನಾಮಪತ್ರ ಸಲ್ಲಿಸಲು ನವೆಂಬರ್ 17 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭೆ ಹಾಗೂ 5 ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ ಎಂದು ಆಯೋಗ ಹೇಳಿದೆ. 

Similar News