×
Ad

ಈ ಸೊಗಸುಗಾರನಿಗೆ ರುಮಾಲು ಶೋಕಿಯಲ್ಲ; ಹಳ್ಳಿಯೆಡೆಗಿನ ಅಂತಃಕರಣ

Update: 2022-11-06 01:05 IST

ಮಂಝರ್ ಅವರ ಗ್ರಾಮಭಾರತ ಕುರಿತ ಒಳನೋಟಗಳಿಗೆ ಕಾರಣ ಹಳ್ಳಿಗಳೊಂದಿಗಿನ ಅವರ ನಿರಂತರ ಒಡನಾಟ. ಈವರೆಗೆ ಅವರು 10 ಸಾವಿರ ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಹಳ್ಳಿಗಳೊಳಗಿನ ಅದಮ್ಯ ಚೈತನ್ಯವನ್ನು ಕಂಡಿದ್ದಾರೆ.

ಕೆಲಸವಿಲ್ಲದೆ, ದುಡ್ಡಿಲ್ಲದೆ ಕಂಗೆಟ್ಟಿದ್ದ ಅವನು ವಾಸಿಸುತ್ತಿದ್ದದ್ದು ಸ್ಲಮ್ಮಿನಲ್ಲಿ. ಎದುರಲ್ಲೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ. ಅಲ್ಲಿ ಓದುತ್ತಿದ್ದ ಹುಡುಗಿ ಊಟ ತಂದುಕೊಟ್ಟದ್ದು, ಆ ಆಪ್ತತೆಯೇ ಪ್ರೇಮಕ್ಕೆ ತಿರುಗಿದ್ದು, ಅಂತರ್‌ಧರ್ಮೀಯ ಮದುವೆಗೆ ಇಬ್ಬರ ಕುಟುಂಬದವರೂ ಒಪ್ಪದೆ, ಅವರ ಅನುಪಸ್ಥಿತಿಯಲ್ಲೇ ಸರಳವಾಗಿಯೇ ಪರಸ್ಪರ ಕೈಹಿಡಿದು ಒಬ್ಬರಿಗೊಬ್ಬರಾದದ್ದು. ಇಂದು ಡಿಜಿಟಲ್ ಉದ್ಯಮದಲ್ಲಿ ಬಹುದೊಡ್ಡ ಹೆಸರಾಗಿರುವ ಉಸಾಮಾ ಮಂಝರ್ ಮತ್ತು ಶಫಾಲಿ ಚಿಕರ್ಮಾನೆ ಪ್ರೇಮಕಥೆ ಹೀಗೆ ಅದಾವುದೋ ಅದಮ್ಯ ನಂಬಿಕೆಯ ಬಿಂದುವಿನಲ್ಲಿ ಮೊದಲಾಯಿತು. ಒಬ್ಬ ಉದ್ಯಮಿಯಾಗಿ ತಮ್ಮ ಯಶಸ್ಸಿನ ಪ್ರಯಾಣದಲ್ಲಿ ಈ ಘಟನೆಯನ್ನೇ ಪ್ರಮುಖ ಮೈಲುಗಲ್ಲೆಂದು ಮಂಝರ್ ಭಾವಿಸುವುದರಿಂದ ಅವರ ಕಥೆಗೆ ಈ ಮುನ್ನುಡಿಯೇ ಸರಿ.

ಎಷ್ಟು ದೇಶ ಸುತ್ತಿದರೂ ಮಂಝರ್ ಕಣ್ಣುಗಳು ತವಕಿಸುವುದು ಹಳ್ಳಿಗಳ ಸಿರಿವಂತಿಕೆ ತುಂಬಿಕೊಳ್ಳುವುದಕ್ಕಾಗಿ. ರಾಜಕಾರಣ ಮತ್ತು ಹವಾಗುಣ ಎರಡರಲ್ಲೂ ವಿಷ ತುಂಬಿರುವ ದಿಲ್ಲಿಯಲ್ಲಿ ನೆಲೆಸಲಾರೆ ಎನ್ನಿಸಿ ಪುದುಚೇರಿಯಲ್ಲಿ ಮನೆ ಕಟ್ಟಿಸುತ್ತಿರುವ ಮಂಝರ್, ಅಲ್ಲಿ ತಮ್ಮ ಬರಿಪಾದವನ್ನು ಮಣ್ಣಲ್ಲೂರುವ ಸುಖ ಅನುಭವಿಸುವ ಭಾವಜೀವಿ. ಅವರ ಉದ್ಯಮಿ ಮನಸ್ಸಲ್ಲಿಯೂ, ಈ ಮಣ್ಣಿನ ಕಸುವು ತುಂಬಿಕೊಂಡ ಶ್ರಮಿಕರು ಮತ್ತು ಕಷ್ಟಜೀವಿಗಳಾದ ಕರಕುಶಲಿಗರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿಯೇ ಅನವರತ ತುಡಿತ.

ಪತ್ರಿಕೋದ್ಯಮ, ಸಾಫ್ಟ್‌ವೇರ್ ಮೊದಲಾದ ಕ್ಷೇತ್ರಗಳಲ್ಲಿ ಹಲವು ವರ್ಷ ದುಡಿದ ಅವರು ಹೊಸ ದಾರಿಯ ಪಥಿಕನಾದದ್ದು 20 ವರ್ಷಗಳ ಕೆಳಗೆ ಡಿಜಿಟಲ್ ಎಂಪವರ್ಮೆಂಟ್ ಫೌಂಡೇಷನ್ (ಡಿಎಎಫ್) ಸ್ಥಾಪಿಸುವ ಮೂಲಕ. ಇಂಟರ್‌ನೆಟ್ ಎಂಬುದು ಯಾರ್ಯಾರದೋ ಕೈಯಲ್ಲಿನ ಅಪಾಯಕಾರಿ ಅಸ್ತ್ರವಾಗಿಬಿಟ್ಟಿರುವ ಕಾಲದಲ್ಲಿ ಅದನ್ನೊಂದು ಪರ್ಯಾಯವಾಗಿ ಸಾಕಾರಗೊಳಿಸುವ ಕೆಲಸದಲ್ಲಿ ತೊಡಗಿಕೊಂಡವರು ಮಂಝರ್.

ಈ ದೇಶದ ಕಡುಬಡವರು ಇಂಟರ್‌ನೆಟ್ ಬಳಕೆಯನ್ನು ಕಲಿತು ಅದನ್ನು ಜೀವನೋಪಾಯವಾಗಿಸಿಕೊಳ್ಳುವುದಕ್ಕೆ, ಕಡೇಪಕ್ಷ ಅವರು ಒಂದಿಷ್ಟು ಮಾಹಿತಿ, ಅವಕಾಶಗಳು, ತಮ್ಮ ಹಕ್ಕಿನ ಬಗ್ಗೆ ತಿಳಿಯುವುದಕ್ಕಾದರೂ ನೆರವಾಗಬೇಕೆಂಬ ಹಂಬಲ, ಹಳ್ಳಿಗರು ಹೊಂದಿರುವ ತಿಳುವಳಿಕೆ ಮತ್ತು ಜ್ಞಾನ ಅವರಿಗೆ ಬದುಕುವ ದಾರಿಯಾಗಿ ಬದಲಾಗುವಂತೆ ಮಾಡುವ ಯೋಚನೆಯಲ್ಲಿ ಹುಟ್ಟಿಕೊಂಡ ಡಿಎಎಫ್, ಈ ಎರಡು ದಶಕಗಳಲ್ಲಿ ಲೆಕ್ಕವಿಲ್ಲದಷ್ಟು ಅಮಾಯಕರಿಗೆ ಬಲವಾಗಿದೆ, ನೆಲೆ ತೋರಿಸಿದೆ. ಅವರೊಳಗಿನ ಶಕ್ತಿ ಎಂಥದೆಂಬುದನ್ನು ಅವರಿಗೇ ಪರಿಚಯಿಸಿ ಪ್ರೇರೇಪಿಸಿದೆ.

ಮೊಬೈಲ್ ಆ್ಯಪ್‌ನಿಂದ ಹಿಡಿದು, ಅಗತ್ಯವುಳ್ಳವರಿಗೆ ಸೂಕ್ತ ಸಾಮಾಜಿಕ, ಶೈಕ್ಷಣಿಕ ನೆರವು ಒದಗಿಸುವವರೆಗೆ ಸುಮಾರು 30ಕ್ಕೂ ಹೆಚ್ಚು ಬಗೆಯಲ್ಲಿ ಮಂಝರ್ ಅವರ ಈ ಫೌಂಡೇಶನ್ ತೊಡಗಿಸಿಕೊಂಡಿದೆ. ಬಡತನದ ರೇಖೆಗಿಂತಲೂ ಕೆಳಗಿರುವವರ ಕುಟುಂಬಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ, ವಿಶೇಷ ಚೇತನರಿಗೆ ಸಹಾಯವೊದಗಿಸುವ ಹಲವು ಯೋಜನೆಗಳನ್ನು ಈ ಫೌಂಡೇಶನ್ ಹೊಂದಿದೆ. ಮಂಝರ್ ಅವರ ಕೆಲವು ಆಲೋಚನೆಗಳು ರಾಷ್ಟ್ರೀಯ ನೀತಿಯಲ್ಲಿ ಅಳವಡಿಕೆಯಾಗಿವೆ. ಇಂಟರ್‌ನೆಟ್ ಬಳಕೆ ಮೂಲಕ ಗ್ರಾಮೀಣ ಪ್ರದೇಶದ ಅದೆಷ್ಟೋ ಜನರು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳುವಲ್ಲಿ ಡಿಎಎಫ್ ಮಹತ್ವದ ಪಾತ್ರ ವಹಿಸಿದೆ. ಡಿಜಿಟಲ್ ಸಾಕ್ಷರತೆ, ಗ್ರಾಮೀಣಾಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಸರಕಾರದ ಇಲಾಖೆಗಳ ಸಹಯೋಗದಲ್ಲಿ ಮಂಝರ್ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಕ್ಕಾಗಿ, ಹೊಸ ಪ್ರತಿಭೆಗಳಿಗೆ ಹಲವು ಪ್ರಶಸ್ತಿಗಳನ್ನೂ ಅವರು ಕೊಡುತ್ತ ಬಂದಿದ್ದಾರೆ.

ಡಿಎಎಫ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಎರಡು ಸಾವಿರ ಸಮುದಾಯ ಮಾಹಿತಿ ಸಂಪನ್ಮೂಲ ಕೇಂದ್ರಗಳಲ್ಲಿ ಹೆಚ್ಚಿನವು ಮಹಿಳೆಯರೇ ನಡೆಸುವ ಕೇಂದ್ರಗಳು. ಹೇಗೆ ಕಂಪ್ಯೂಟರ್ ಬಳಸಬೇಕೆಂದು ಹಳ್ಳಿಗರಿಗೆ ಕಲಿಸಿಕೊಡುವುದರಿಂದ ಹಿಡಿದು, ಅವರ ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಬಗೆಹರಿಸುವವರೆಗೆ ಪ್ರತಿಯೊಂದನ್ನೂ ಮಾಡಲು ತರಬೇತಿ ಪಡೆದವರುಳ್ಳ ಕೇಂದ್ರಗಳಿವು. ೯೫ ವರ್ಷದ ಮಹಿಳೆಯೊಬ್ಬರಿಗೆ ಬರಬೇಕಾದ ವೃದ್ಧಾಪ್ಯವೇತನ ವರ್ಷಗಳಿಂದ ಬಾರದೇ ಇದ್ದಾಗ ಅದನ್ನು ಅಂಚೆಕಚೇರಿಯಲ್ಲಿಯೇ ಯಾರೋ ನಕಲಿ ಸಹಿ ಹಾಕಿ ಜೇಬಿಗಿಳಿಸಿಕೊಳ್ಳುತ್ತಿದ್ದುದನ್ನು ಬಯಲಿಗೆಳೆದು ಕಡೆಗೆ ಆಕೆಗೆ ಬರಬೇಕಾದ ಅಷ್ಟೂ ಬಾಕಿ ಹಣವೂ ಬರುವಂತೆ ಮಾಡಿಸಿದ್ದು, ವಿಧವೆಯೊಬ್ಬಳು ತನ್ನ ಪಡಿತರ ಅಂಗಡಿಯ ವಿಸ್ತರಣೆಗೆ ಸರಕಾರಿ ಸಾಲ ಪಡೆಯಲು ನೆರವಾದದ್ದು, ಹಿಂಜರಿಕೆ ಸ್ವಭಾವದ ಮಹಿಳೆಯರು ಆನ್‌ಲೈನ್ ಮೂಲಕವೇ ವೈದ್ಯೆಯೊಂದಿಗೆ ಸಮಸ್ಯೆ ಹೇಳಿಕೊಳ್ಳಲು ಅನುಕೂಲ ಕಲ್ಪಿಸಿದ್ದು ಹೀಗೆ ಹೇಳುತ್ತ ಹೋಗುವಷ್ಟು ದೊಡ್ಡದಿದೆ ಪಟ್ಟಿ. 2011ರಲ್ಲಿ ದಿಲ್ಲಿಗೆ ಬಂದು ಬಳಿಕ ಪ್ಯೂನ್ ಆಗಿ ಡಿಎಎಫ್ ಸೇರಿದ್ದ ಪಶ್ಚಿಮ ಬಂಗಾಳದ ಮಹಿಳೆ ಕಂಪ್ಯೂಟರ್ ಜೋಡಣೆಯಿಂದ ಹಿಡಿದು ಗ್ಯಾಡ್ಜೆಟ್ಸ್ ಕುರಿತ ತಿಳುವಳಿಕೆಯನ್ನೂ ಸಂಪಾದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದು ಸಣ್ಣ ಸಂಗತಿಯೇನಲ್ಲ. 

ಮಂಝರ್ ಅವರ ಗ್ರಾಮಭಾರತ ಕುರಿತ ಒಳನೋಟಗಳಿಗೆ ಕಾರಣ ಹಳ್ಳಿಗಳೊಂದಿಗಿನ ಅವರ ನಿರಂತರ ಒಡನಾಟ. ಈವರೆಗೆ ಅವರು ೧೦ ಸಾವಿರ ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಹಳ್ಳಿಗಳೊಳಗಿನ ಅದಮ್ಯ ಚೈತನ್ಯವನ್ನು ಕಂಡಿದ್ದಾರೆ. ‘‘ಹಳ್ಳಿಗಳೊಂದಿಗೆ ನನಗೆ ಗಟ್ಟಿಯಾದ ಬಾಂಧವ್ಯವಿದೆ. ಹಳ್ಳಿಗಳಲ್ಲಿನ ಜ್ಞಾನ ಅಸಾಧಾರಣ. ಅದು ಯಾವ ಶಾಲೆ ಕಾಲೇಜುಗಳಲ್ಲಿಯೂ ಸಿಗುವಂಥದ್ದಲ್ಲ’’ ಎನ್ನುತ್ತಾರೆ ಅವರು. ಹತ್ತಿಬಟ್ಟೆಯೆಂದರೆ ಮಂಝರ್ ಅವರಿಗೆ ಇಷ್ಟ. ಆದರೆ ಕರಕುಶಲಿಗಳ ಕಷ್ಟವನ್ನು, ಸಾಲಬಾಧೆಯಲ್ಲಿ ಬೇಯುತ್ತ ಬದುಕುತ್ತಿರುವ ಅವರ ಕಡುಬಡತನವನ್ನು ಅರಿತವರಾಗಿ, ಕೈಮಗ್ಗದ ಬಟ್ಟೆ ತೊಡುವುದನ್ನು ಅವರು 2009ರಿಂದಲೂ ರೂಢಿ ಮಾಡಿಕೊಂಡಿದ್ದಾರೆ. ‘‘ನಮ್ಮ ಹತ್ತಿ ಅತ್ಯುತ್ತಮ. ಆದರೆ ನಾವದನ್ನು ಮಾರುವ ಸಾಮರ್ಥ್ಯ ಹೊಂದಿಲ್ಲ. ಯಾಕೆಂದರೆ ನಮಗೆ ಜಗತ್ತಿನಾದ್ಯಂತ ಮುಟ್ಟುವುದು ಹೇಗೆಂದು ಗೊತ್ತಿಲ್ಲ’’ ಎಂದು ಇಂಟರ್‌ನೆಟ್ ಬಳಕೆಯಲ್ಲಿ ನಾವು ಹಿಂದಿರುವುದನ್ನು ವಿವರಿಸುವ ಅವರು, ‘‘ಜಗತ್ತು ಭಾರತೀಯರನ್ನು ಗ್ರಾಹಕರೆಂದು ಪರಿಗಣಿಸುತ್ತಿದೆ. ಇದಕ್ಕೆ ಕಾರಣ ನಾವು ಇಂಟರ್‌ನೆಟ್‌ನಲ್ಲಿ ತೀರಾ ಹಿಂದುಳಿದಿರುವುದು’’ ಎನ್ನುತ್ತಾರೆ.

ಎತ್ತರದ ಆಳ್ತನವಿರುವ ಈ ಸುಂದರ ಮಂಝರ್ ಸದಾ ರುಮಾಲುಧಾರಿ. ಹಾಗೆಂದು ಇವರಿಗೆ ರುಮಾಲೆಂಬುದು ಶೋಕಿಯಲ್ಲ, ಸೋಗು ಅಲ್ಲ. ಅದು ಹಳ್ಳಿಗಡೆಗಿನ ಅವರ ಅಂತಃಕರಣದ ಪ್ರತೀಕ. ಗ್ರಾಮೀಣ ಸೊಗಡಿನೆಡೆಗಿನ ಅವರ ಕಳಕಳಿ, ಕಾಳಜಿ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಚೆಲುವಾಗಿಸಿದೆ. ತಮ್ಮೊಳಗಿನ ನಂಬಿಕೆಯನ್ನು ನೆಚ್ಚಿ ನಡೆದಿರುವ ಅವರ ಕಣ್ಣಲ್ಲಿ ಗ್ರಾಮೀಣ ಭಾರತದ ತಾಕತ್ತಿನ ಚೆಲುವು ಕೂಡ ಹೊಳೆಯುತ್ತಿದೆ.

 

Similar News