ರಾಷ್ಟ್ರೀಯ ಸನ್ನಿ

Update: 2022-11-06 04:47 GMT

ಶಾಲೆಯಲ್ಲಿ ಶಿಕ್ಷಕರು ‘‘ಯಾರ್ಯಾರು ಡ್ಯಾನ್ಸ್ ಕ್ಲಾಸಿಗೆ ಸೇರ್ತೀರಾ?’’ ಎಂದೇನಾದರೂ ಕೇಳಿದರೆ, ಮಕ್ಕಳಿಂದ ನಾನಾ ಬಗೆಯ ಪ್ರತಿಕ್ರಿಯೆಗಳು ಬರುವವು.
‘‘ನನಗೆ ಇಷ್ಟ. ಆದರೆ ನಮ್ಮ ಮನೆಯಲ್ಲಿ ಬಿಡಲ್ಲ.’’

‘‘ಮಾರ್ಕ್ಸ್ ಕಡಿಮೆ ಬರ್ತಿದೆ, ಅಮ್ಮ ಬೇಡಾಂತಾರೆ.’’ ‘‘ಅಪ್ಪ ಸೇರಿಕೋ ಅಂತಾರೆ, ಅಮ್ಮ ಬೇಡಾಂತಾರೆ’’ ಅಥವಾ ‘‘ಅಮ್ಮ ಸೇರ್ಕೋ ಅಂತಾರೆ, ಅಪ್ಪ ಬೇಡಾಂತಾರೆ.’’
‘‘ಮನೇಲಿ ಕೇಳಿ ಹೇಳ್ತೀನಿ.’’
‘‘ಅದರಿಂದ ಪಾಠಗಳು ತಪ್ಪಬಹುದೇನೋ, ಬೇಡ.’’
ತಮ್ಮ ಗೆಳೆಯ ಅಥವಾ ಗೆಳತಿಗೆ ‘‘ನೀನು ಸೇರ್ಕೊಂಡ್ರೆ ನಾನೂ ಸೇರ್ಕೊಳ್ತೀನಿ.’’


ಈ ಮಕ್ಕಳಿಗೆ ನಿರ್ಣಯ ತೆಗೆದುಕೊಳ್ಳಲು ಬರುವುದಿಲ್ಲ. ಅವರಿಗೆ ಹಾಗೇ ರೂಢಿ ಮಾಡಿಸಿರಲಾಗಿರುತ್ತದೆ. ಎಲ್ಲಾದರೂ ಹೋದಾಗ ಪೋಷಕರು ಅನುಮತಿ ನೀಡಿದರೆ ಮಾತ್ರವೇ ಕೆಲವು ಮಕ್ಕಳು ತಿನ್ನಲೋ ಅಥವಾ ಕುಡಿಯುವುದೋ ಪಡೆಯುವುದು. ತಗೋ ಅಂದರೆ ತಗೊಳ್ತಾರೆ. ಬೇಡ ಅಂದರೆ ಸುಮ್ಮನಾಗುತ್ತಾರೆ. ಇದು ಬರೀ ಯಾವುವೋ ಕೆಲವು ವಿಷಯಗಳಿಗೆ ಮಾತ್ರ ಸೀಮಿತ ವಾಗಿರುವುದಿಲ್ಲ. ಅವರ ಮನೋಯಂತ್ರವೇ ಆ ರೀತಿಯಲ್ಲಿ ಯೋಜಿಸಲ್ಪಟ್ಟಿರುತ್ತವೆ ಅಥವಾ ಪ್ರೋಗ್ರಾಮಿಂಗ್ ಆಗಿರುತ್ತವೆ. ಒಂದು ವಿಷಯ ನೆನಪಿನಲ್ಲಿಡಬೇಕು. ಮನಸ್ಸಿನ ವಿಷಯದಲ್ಲಿ ಪ್ರೋಗ್ರಾಮಿಂಗ್ ಎಂದರೆ ಅಥವಾ ಯೋಜಿಸಲ್ಪಡುವುದೆಂದರೆ ರೂಢಿ ಮಾಡಿಸುವುದು. ನಡವಳಿಕೆಯನ್ನು, ಆಲೋಚನೆಯನ್ನು, ಧೋರಣೆಯನ್ನು, ನೋಡುವ ಬಗೆಯನ್ನು, ಒಪ್ಪುವ ಅಥವಾ ನಿರಾಕರಿಸುವ ರೀತಿಯನ್ನು ಸತತವಾಗಿ ಅಥವಾ ಪುನರಾವರ್ತಿತ ವಾಗಿ ಮಾಡಿಸಿದರೆ ಅದು ರೂಢಿಗತವಾಗುತ್ತದೆ. ರೂಢಿಯಾಗುವ ವ್ಯಾಪ್ತಿ ಬಹಳ ವಿಶಾಲವಾದದ್ದು. ಅದರಲ್ಲಿ ಆಹಾರದ ರುಚಿ ಅಭಿರುಚಿ, ಉಡುಪುಗಳ ವಿನ್ಯಾಸ, ತಾನು ಶ್ರೇಷ್ಠ ಅಥವಾ ಕನಿಷ್ಠ ಎಂಬ ಭಾವ, ಅವರು ಯಾವಾಗಲೂ ಸರಿ ಅಥವಾ ಯಾವಾಗಲೂ ತಪ್ಪು ಎನ್ನುವಂತಹ ತೀರ್ಮಾನ; ಹೀಗೆ ಬಹಳಷ್ಟು ವಿಷಯಗಳು ಇದ್ದು, ಅದರ ಅನುಸಾರವಾಗಿ ಪ್ರತಿಕ್ರಿಯೆಗಳನ್ನು ಕೊಡುತ್ತಿರುತ್ತಾರೆ. ಮನಸ್ಸು ಒಮ್ಮೆ ಹೀಗೆ ಪ್ರೋಗ್ರಾಮಿಂಗಿಗೆ ಒಳಪಟ್ಟರೆ ಅವರಿಗೆ ಸ್ವಯಂ ನಿರ್ಣಯಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಯಾವುದು ಸರಿ, ಯಾವುದು ತಪ್ಪುಅಥವಾ ಅಗತ್ಯ ಮತ್ತು ಅನಗತ್ಯಗಳನ್ನು ಬೇರ್ಪಡಿಸಿ ಸ್ಪಷ್ಟವಾಗಿ ಗುರುತಿಸುವ ವಿವೇಚನಾ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾರೆ. ಅವರ ಎಲ್ಲಾ ನಡವಳಿಕೆ ಮತ್ತು ಪ್ರತಿಕ್ರಿಯೆಗಳೂ ರೂಢಿಗನುಸಾರವಾಗಿಯೇ ಪ್ರಕಟಗೊಳ್ಳುತ್ತಿರುತ್ತವೆ. ಅವರು ಯಾವಾಗಲೂ ತಮಗೆ ದೊರಕಿರುವ ಚೌಕಟ್ಟಿನಲ್ಲಿಯೇ ಮಾತ್ರ ಯೋಚಿಸುತ್ತಿರುತ್ತಾರೆ. ಏಕೆಂದರೆ ಅವರಿಗೆ ಹೇಗೆ ಯೋಚಿಸಬೇಕು ಎಂದು ತಿಳಿಸಿಕೊಡದೇ ಹೀಗೆಯೇ ಯೋಚಿಸಬೇಕು ಎಂದು ರೂಢಿ ಮಾಡಿಸಿರಲಾಗುತ್ತದೆ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಬಹಳ ಅಪಾಯಕಾರಿ. ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ಸವಾಲುಗಳನ್ನು ತಾವು ತಾವಾಗಿ ಎದುರಿಸಲು ಸಾಧ್ಯವಾಗದೇ ಅಂದು ಡ್ಯಾನ್ಸ್ ಕ್ಲಾಸಿಗೆ ಸೇರಲು ಕೇಳುತ್ತಿದ್ದಂತೆ, ಅದ್ಯಾವುದೋ ತಿಂಡಿಯನ್ನು ತಿನ್ನುವುದೋ ಬೇಡವೋ ಎಂದು ಅನುಮತಿಗೆ ಕಾಯುತ್ತಿದ್ದಂತೆ; ಒಟ್ಟಾರೆ ಯಾವುದನ್ನು ಇಷ್ಟ ಪಡಬೇಕು, ಯಾವುದನ್ನು ಇಷ್ಟ ಪಡಬಾರದು ಎಂದು ಪಾಠವನ್ನು ಮಾಡಿಸಿಕೊಂಡಂತೆ ಇಂದಿಗೂ ಯಾರಾದರೊಬ್ಬರನ್ನು ಕಾಯುತ್ತಿರುತ್ತಾರೆ. ಅವರೇ ಸುಲಭವಾಗಿ ಸಮೂಹ ಸನ್ನಿಗೆ ಒಳಗಾಗುವ ಜನರು. ಅವರು ಸಂವಹನ ನಡೆಸಲು ಸಿದ್ಧವಿರುವುದು ಅವರವರ ಗುಂಪುಗಳಲ್ಲಿ ಮಾತ್ರವೇ. ತಮ್ಮ ಗುಂಪುಗಳು ಯಾವುದನ್ನು ಮೌಲ್ಯ ಎಂದು ಭಾವಿಸಿರುತ್ತದೆಯೋ ಅದನ್ನೇ ಸರಿ ಎಂದು ತಿಳಿಯುವುದು ಮಾತ್ರವಲ್ಲದೇ ಅದನ್ನು ವಿರೋಧಿಸುವವರನ್ನು ದ್ವೇಷಿಸುವರು. ಅವರ ಅತಿರೇಕಗಳನ್ನು ಆ ಗುಂಪಿನಲ್ಲಿ ಸ್ವಲ್ಪ ಮಟ್ಟಿಗೆ ಯಾರಾದರೂ ಸಮರ್ಥಿಸುವರೋ ಅಥವಾ ಗಟ್ಟಿದನಿಯಲ್ಲಿ ಸರಿಯೆಂದು ಹೇಳುವರೋ ಅವರೇ ತಂಡದ ನಾಯಕರಾಗುತ್ತಾರೆ. ತಾವಾಗಿ ಅದನ್ನು ಸರಿಯೋ ತಪ್ಪೋ ಎಂದು ವಿಚಾರ ಮಾಡುವುದಿರಲಿ, ತಪ್ಪಿರಬಹುದು ಎಂಬ ಒಂದು ಆಲೋಚನೆ ಕೂಡಾ ಇರುವುದಿಲ್ಲ. ಬದಲಾಗಿ ಅದೇ ಸರಿ, ಉಳಿದಿದ್ದೆಲ್ಲವೂ ತಪ್ಪುಎಂಬ ಪೂರ್ವ ನಿರ್ಧಾರಿತ ನಿರ್ಣಯವನ್ನೇ ಹೊಂದಿರುತ್ತಾರೆ. ಆದರೆ ವೈಯಕ್ತಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ ಅದರಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಲಕ್ಷಣಗಳು ಕಂಡಾಗ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡ ನಿರ್ವಹಣೆ ಮಾಡಲಾಗದೇ ಇಡೀ ಗುಂಪೇ ವ್ಯಗ್ರವಾಗಿ ವರ್ತಿಸುತ್ತದೆ. ವಿವೇಚನೆ ಮತ್ತು ಪ್ರಜ್ಞೆ ಇಲ್ಲದ ಕಾರಣ ತಮ್ಮ ಮುಂದಾಳುಗಳು ಏನೇ ಹೇಳಿದರೂ ಅದನ್ನು ಅವರು ಪರಿಶೀಲಿಸದೆಯೇ ಸಮ್ಮತಿ ಸೂಚಿಸುವುದಲ್ಲದೇ, ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಪಡುತ್ತಾರೆ. ಅವರ ಗುಂಪು ನಿರ್ಧರಿಸುವ ನೈತಿಕತೆಯ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕೆಂದು ಒತ್ತಾಯಿಸುತ್ತಾರೆ. ಭ್ರಮಾಧೀನ ಸ್ಥಿತಿಯಲ್ಲಿರುವಂತಿದ್ದು ಕ್ರಿಯಾಶೀಲರಾಗಿರಬೇಕೆಂದು ಬಯಸುತ್ತಾರೆ. ಇದು ಶಾಲೆಯಲ್ಲಿ ಅಥವಾ ಕುಟುಂಬಗಳಲ್ಲಿ ಸಣ್ಣಪುಟ್ಟ ಸಮವಯಸ್ಸಿನವರ ಅಥವಾ ಸಮಾನ ಆಸಕ್ತರ ಗುಂಪುಗಳಲ್ಲಿ ಮಾತ್ರವಲ್ಲದೇ, ಧಾರ್ಮಿಕತೆಯ, ಜಾತೀಯತೆಯ, ರಾಜಕೀಯ ಪಕ್ಷಗಳ ಒಲವಿನ, ವ್ಯಕ್ತಿಯೊಬ್ಬನ ಅಭಿಮಾನಿಗಳ, ಸಿದ್ಧಾಂತ, ಮತಾಂಧತೆಯ; ಹೀಗೆ ಯಾವುದೇ ಸಮೂಹ ಸನ್ನಿಗೆ ಒಳಗಾಗಬಹುದು. ಇಂತಹ ಸಮೂಹ ಸನ್ನಿಯನ್ನೇ ಧಾರ್ಮಿಕ ಒಗ್ಗಟ್ಟು ಎಂದೋ, ರಾಷ್ಟ್ರೀಯತೆ ಎಂದೋ ಕರೆಯಲೂ ಹಿಂಜರಿಯುವುದಿಲ್ಲ

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ