ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು

Update: 2022-11-06 04:29 GMT

ತಿರುವನಂತಪುರಂ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮತ್ತೆ ರಾಜ್ಯ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಗಣಿಸುವ ಸಾಧ್ಯತೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಶನಿವಾರ ಸುಳಿವು ನೀಡಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಹದಿನಾಲ್ಕನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡುವ ಸಂಬಂಧ ಮಾತನಾಡುವ ವೇಳೆ ಸಚಿವರು ಈ ಸುಳಿವು ನೀಡಿದರು.

ಕೇಂದ್ರ- ರಾಜ್ಯ ಸಂಬಂಧಗಳ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) 2014-15ರಲ್ಲಿ ಶೇಕಡ 42ರಷ್ಟು ತೆರಿಗೆಯನ್ನು ರಾಜ್ಯಗಳಿಗೆ ನೀಡಬೇಕು ಎಂಬ 14ನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಯಾವ ಹಿಂಜರಿಕೆಯೂ ಇಲ್ಲದೇ ಆಂಗೀಕರಿಸಿದರು. ಇದು ಹಿಂದೆ ಇದ್ದ ಪಾಲಿಗಿಂತ ಶೇಕಡ 32ರಷ್ಟು ಅಧಿಕ ಎಂದು ಹೇಳಿದರು.

ರಾಜ್ಯಗಳ ಅನುದಾನವನ್ನು ಶೇ. 42ಕ್ಕೆ ಹೆಚ್ಚಿಸಬೇಕು ಎಂದು ಹಣಕಾಸು ಆಯೋಗ ಹೇಳಿತು. ಅಂದರೆ ಕೇಂದ್ರದ ಬಳಿ ಅಲ್ಪ ಹಣ ಉಳಿಯುತ್ತದೆ. ಯಾವುದೇ ಹಿಂಜರಿಕೆ ಇಲ್ಲದೇ ಪ್ರಧಾನಿ ಮೋದಿಯವರು ಸಂಪೂರ್ಣವಾಗಿ ಶಿಫಾರಸ್ಸು ಒಪ್ಪಿಕೊಂಡರು. ಆದ್ದರಿಂದ ರಾಜ್ಯಗಳು ಶೇ. 42ರಷ್ಟು ಪಾಲು ಪಡೆಯುವಂತಾಯಿತು. ಇದೀಗ ಜಮ್ಮು ಕಾಶ್ಮೀರ ರಾಜ್ಯವಲ್ಲದ್ದರಿಂದ ಶೇಕಡ 41ಕ್ಕೆ ಇಳಿದಿದೆ.

"ಇದು ಶೀಘ್ರವೇ ಅಥವಾ ಸ್ವಲ್ಪ ಸಮಯದಲ್ಲಿ ಮತ್ತೆ ರಾಜ್ಯವಾಗಬಹುದು" ಎಂದು ಸಹಕಾರ ಒಕ್ಕೂಟ ವ್ಯವಸ್ಥೆ: ಆತ್ಮನಿರ್ಭರ ಭಾರತದತ್ತ ಮಾರ್ಗ" ("Cooperative Federalism: The Path Towards Atma Nirbhar Bharat") ಎಂಬ ಉಪನ್ಯಾಸದಲ್ಲಿ ಸುಳಿವು ನೀಡಿದರು. ಭಾರತೀಯ ವಿಚಾರ ಕೇಂದ್ರ ವತಿಯಿಂದ ಪರಮೇಶ್ವರನ್ ಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

2019ರ ಆಗಸ್ಟ್‌ನಲ್ಲಿ ಸರ್ಕಾರ, ಸಂವಿಧಾನದ 370ನೇ ವಿಧಿ ರದ್ದುಪಡಿಸಿ, ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಈ ಬಗ್ಗೆ newindianexpress.com ವರದಿ ಮಾಡಿದೆ.

Similar News