ಹರ್ಯಾಣ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿಯ ಭವ್ಯ ಬಿಷ್ಣೋಯ್ ಗೆ ಭರ್ಜರಿ ಜಯ

Update: 2022-11-06 08:46 GMT

ಚಂಡಿಗಡ: ಬಿಜೆಪಿಯ ಭವ್ಯಾ ಬಿಷ್ಣೋಯ್ ಅವರು ಹರ್ಯಾಣದ ಆದಂಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈ ಪ್ರಕಾಶ್ ಅವರನ್ನು 16,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

ಹರ್ಯಾಣದಲ್ಲಿ ಸತತ ಎರಡು ಉಪಚುನಾವಣೆಗಳಲ್ಲಿ ಸೋತ ನಂತರ ಆದಂಪುರದಲ್ಲಿ ಬಿಜೆಪಿ ಕೊನೆಗೂ ಗೆಲುವು ಸಾಧಿಸಿದೆ. ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕುಲದೀಪ್ ಬಿಷ್ಣೋಯ್ ಜಯ ಸಾಧಿಸಿದ್ದರು.

ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಕಿರಿಯ ಪುತ್ರ ಕುಲದೀಪ್ ಬಿಷ್ಣೋಯ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾದ ನಂತರ ಉಪಚುನಾವಣೆ ಅಗತ್ಯವಾಗಿತ್ತು. ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಭವ್ಯ ಅವರು ಕುಲದೀಪ್ ಬಿಷ್ಣೋಯ್ ಅವರ ಮಗ.

ಐದು ದಶಕಗಳಿಂದ ಆದಂಪುರ ವಿಧಾನಸಭಾ ಕ್ಷೇತ್ರವು  ಭಜನ್ ಲಾಲ್ ಕುಟುಂಬದ ಭದ್ರಕೋಟೆಯಾಗಿದೆ.

ಗುರುವಾರ ಮತದಾನ ನಡೆದ ಹಿಸಾರ್ ಜಿಲ್ಲೆಯ ಆದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.45ರಷ್ಟು ಮತದಾನವಾಗಿತ್ತು.

Similar News