ಗುಜರಾತ್‌ ಚುನಾವಣಾ ಕಣದಿಂದ ಹಿಂದೆ ಸರಿಯಲು ಎಎಪಿಗೆ ಆಮಿಷ: ಆರೋಪ ಶುದ್ಧ ಸುಳ್ಳೆಂದ ಬಿಜೆಪಿ

Update: 2022-11-06 13:36 GMT

ಹೊಸದಿಲ್ಲಿ: ಗುಜರಾತ್ ಚುನಾವಣೆಯಿಂದ ಆಮ್ ಆದ್ಮಿ ಪಕ್ಷ ಹಿಂದೆ ಸರಿಯಲು ಆಮಿಷ ನೀಡಿದ್ದಾರೆ ಎಂಬ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಬಿಜೆಪಿ ನಿರಾಕರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ರವಿವಾರ ವರದಿ ಮಾಡಿದೆ.

ʼಇದು ಹಸಿ ಸುಳ್ಳುʼ ಎಂದು ಬಿಜೆಪಿ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಹೇಳಿದ್ದಾರೆ.

"ಇದು ಕೇವಲ ಜನರನ್ನು ದಾರಿತಪ್ಪಿಸುವ ಮತ್ತು ಬಿಜೆಪಿಯ ಇಮೇಜ್ ಅನ್ನು ಕೆಡಿಸುವ ಹೇಳಿಕೆಯಾಗಿದೆ. ಕೇಜ್ರಿವಾಲ್ ದಿಲ್ಲಿ ಮತ್ತು ರಾಷ್ಟ್ರದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲು ಅಣ್ಣಾ ಹಜಾರೆಯನ್ನು ಬಳಸಿಕೊಂಡರು ಮತ್ತು ನಂತರ ಅವರನ್ನು ತೊರೆದರು. ಅಧಿಕಾರ ಹಿಡಿಯಲು ಯಾರನ್ನಾದರೂ ದಾರಿ ತಪ್ಪಿಸುತ್ತಾರೆ” ಎಂದು ಕೇಜ್ರಿವಾಲ್‌ ವಿರುದ್ಧ ಜಾಫರ್‌ ಇಸ್ಲಾಂ ವಾಗ್ದಾಳಿ ನಡೆಸಿದ್ದಾರೆ.

ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷವನ್ನು ತೊರೆದರೆ ದಿಲ್ಲಿ ಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ಬಿಜೆಪಿ ಇಟ್ಟಿತ್ತು ಎಂದು ಕೇಜ್ರಿವಾಲ್ ಶನಿವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನೀವು ಗುಜರಾತ್ ನಲ್ಲಿ ಸ್ಪರ್ಧಿಸದಿದ್ದರೆ, ನಾವು ಸತ್ಯೇಂದ್ರ ಜೈನ್ ಮತ್ತು ಸಿಸೋಡಿಯಾ ಇಬ್ಬರನ್ನೂ ಬಿಡುತ್ತೇವೆ ಮತ್ತು ಅವರ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಡುತ್ತೇವೆ ಎಂದು ಅವರು ಹೇಳಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆಮಿಷ ನೀಡಿದವರು ಯಾರು ಎಂಬ ಪ್ರಶ್ನೆಗೆ, ಉತ್ತರಿಸಿದ್ದ ಕೇಜ್ರಿವಾಲ್‌, “ಆಫರ್ ಬಂದಿದೆ... ನೋಡಿ ಅವರು [ಬಿಜೆಪಿ] ನೇರವಾಗಿ ಸಂಪರ್ಕಿಸುವುದಿಲ್ಲ. ಅವರು ಒಬ್ಬರಿಂದ ಒಬ್ಬರಿಗೆ, ಮತ್ತೊಬ್ಬರಿಗೆ, ಮತ್ತೊಬ್ಬರಿಗೆ, ಸ್ನೇಹಿತರ ಮೂಲಕ ಹೋಗುತ್ತಾರೆ ಮತ್ತು ನಂತರ ಸಂದೇಶವು ನಿಮ್ಮನ್ನು ತಲುಪುತ್ತದೆ” ಎಂದಿದ್ದಾರೆ.

ದಿಲ್ಲಿ ಸರ್ಕಾರ ಜಾರಿಗೆ ತಂದಿರುವ ಮದ್ಯ ನೀತಿಯಲ್ಲಿನ ಅಕ್ರಮಗಳಲ್ಲಿ ಸಿಸೋಡಿಯಾ ಭಾಗಿಯಾಗಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ ಆರೋಪಿಸಿತ್ತು. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಅವರನ್ನು ಬಂಧಿಸಲಾಗಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು  ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.

Similar News