ಉ.ಪ್ರ.: ತೋಟದಿಂದ ಪೇರಳೆ ಕಿತ್ತ ಆರೋಪ ; ದಲಿತ ಯುವಕನ ಥಳಿಸಿ ಹತ್ಯೆ

Update: 2022-11-06 16:59 GMT

ಅಲಿಗಢ (ಉ.ಪ್ರ.), ನ. 6: ಇಲ್ಲಿನ ಮನೇನಾ ಗ್ರಾಮದಲ್ಲಿರುವ ತೋಟವೊಂದರಿಂದ ಪೇರಳೆ ಕಿತ್ತ ಆರೋಪದಲ್ಲಿ 25 ವರ್ಷದ ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. 

ಥಳಿತಕ್ಕೊಳಗಾಗಿ ಮೃತಪಟ್ಟ ದಲಿತ ಯುವಕನನ್ನು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
‘‘ನನ್ನ ಸಹೋದರ ಬಯಲು ಮಲ ವಿಸರ್ಜನೆಗೆ ತೆರಳಿದ್ದ. ಹಿಂದಿರುಗುತ್ತಿರುವಾಗ ತೋಟವೊಂದರಿಂದ ಪೇರಳೆ ಕಿತ್ತು ತಿಂದಿದ್ದ. ಈ ಹಿನ್ನೆಲೆಯಲ್ಲಿ ಭೀಮ್‌ಸೇನ್, ಬನ್ವಾರಿ ಹಾಗೂ ತೋಟದ ಮಾಲಕ ಸೇರಿದಂತೆ ಸ್ಥಳೀಯರ ಗುಂಪೊಂದು ನನ್ನ ಸಹೋದರನಿಗೆ ದೊಣ್ಣೆ ಹಾಗೂ ಇತರ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿತು. ಇದರ ಪರಿಣಾಮ ಆತ ಮೃತಪಟ್ಟಿದ್ದಾನೆ’’ ಎಂದು ಓಂಪ್ರಕಾಶ್‌ನ ಸಹೋದರ ಸತ್ಯಪ್ರಕಾಶ್ ಆರೋಪಿಸಿದ್ದಾರೆ.  

ಅಲಿಗಢದ ಗ್ರಾಮದಲ್ಲಿ ನಡೆದ ಜಗಳದ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಕೂಡಲೇ ಅಲ್ಲಿಗೆ ತೆರಳಿದೆವು. ಓಂ ಪ್ರಕಾಶ್ ಪ್ರಜ್ಞೆ ಕಳೆದುಕೊಂಡು ನೆಲದಲ್ಲಿ ಬಿದ್ದಿದ್ದ. ನಾವು ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದೆವು. ಆದರೆ, ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಭೀಮ್‌ಸೇನ್ ಹಾಗೂ ಬನ್ವಾರಿಲಾಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಅಭಯ್ ಕುಮಾರ್ ಅವರು ತಿಳಿಸಿದ್ದಾರೆ.

Similar News