ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು

Update: 2022-11-06 17:59 GMT

ಹೊಸದಿಲ್ಲಿ, ನ. 6:  ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸುಳಿವು ನೀಡಿದ್ದಾರೆ. 

ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ  370 ಅನ್ನು ರದ್ದುಗೊಳಿಸಿದ ಮೂರು ವರ್ಷಗಳ ಬಳಿಕ ನಿರ್ಮಲಾ ಸೀತಾರಾಮನ್ ಅವರು ಈ ಸುಳಿವು ನೀಡಿದ್ದಾರೆ. 
‘‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ 2014-15ರಲ್ಲಿ 14ನೇ ಹಣಕಾಸು ಆಯೋಗ ನೀಡಿದ ಶಿಫಾರಸನ್ನು ಒಪ್ಪಿಕೊಂಡಿದ್ದರು’’ ಎಂದು ಸೀತಾರಾಮನ್ ಹೇಳಿದರು.  

‘‘14ನೇ ಹಣಕಾಸು ಆಯೋಗ ತನ್ನ ವರದಿಯನ್ನು 2014ರಲ್ಲಿ ಸಲ್ಲಿಸಿತ್ತು. ಅನಂತರ ಸಂಗ್ರಹಿಸಲಾದ ಒಟ್ಟು ತೆರಿಗೆಯಲ್ಲಿ ರಾಜ್ಯಗಳಿಗೆ ಶೇ. 32 ನೀಡುವ ಬದಲು ಶೇ. 42ರಷ್ಟು ನೀಡಬೇಕೆಂದು ಅವರು ಹೇಳಿದ್ದರು’’ ಎಂದು ಸೀತಾರಾಮನ್ ತಿಳಿಸಿದರು. 
ಸಂಘದ ಚಿಂತಕ ಪಿ. ಪರಮೇಶ್ವರನ್ ನೆನಪಿನಲ್ಲಿ ‘ಭಾರತೀಯ ವಿಚಾರ ಕೇಂದ್ರಂ’ ಇಲ್ಲಿ ಆಯೋಜಿಸಿದ್ದ ‘‘ಕೋ-ಆಪರೇಟಿವ್ ಪೆಡರಲಿಸಂ: ದಿ ಪಾತ್ ಟವರ್ಡ್ಸ್ ಆತ್ಮ ನಿರ್ಭರ್ ಭಾರತ್’’ ಕುರಿತ ದತ್ತಿ ಉಪನ್ಯಾಸದಲ್ಲಿ  ನಿರ್ಮಲಾ ಸೀತಾರಾಮನ್ ಮಾತನಾಡಿದರು.  

‘‘ಕೇಂದ್ರದ ಕೈಯಲ್ಲಿ ಕಡಿಮೆ ಮೊತ್ತ ಇದೆ ಎಂಬುದು ಇದರ ಅರ್ಥ. ಪ್ರಧಾನಿ ಮೋದಿ ಅವರು ಬೇರೆ ಚಿಂತಿಸದೆ ಹಣಕಾಸು ಆಯೋಗದ ಶಿಫಾರಸನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರು’’ ಎಂದು ಅವರು ತಿಳಿಸಿದರು.  
‘‘ಇಂದು ರಾಜ್ಯಗಳು ಶೇ. 42 ಮೊತ್ತವನ್ನು ಪಡೆಯುತ್ತಿವೆ. ಜಮ್ಮು ಹಾಗೂ ಕಾಶ್ಮೀರ ರಾಜ್ಯವಾಗದೇ ಉಳಿದಿರುವುದರಿಂದ ಅದು  ಶೇ.  41 ಮೊತ್ತವನ್ನು ಪಡೆಯುತ್ತಿದೆ. ಶೀಘ್ರದಲ್ಲಿ ಅಥವಾ ಯಾವಾಗಲಾದರೂ ಅದು ರಾಜ್ಯವಾಗಲಿದೆ’’ ಎಂದು ಅವರು ಹೇಳಿದರು. 
ವಿಧಿ 370 ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ.

Similar News