ದಲಿತ ಮಹಿಳೆಯ ಜೀವಂತ ದಹನ: 14 ಮಂದಿ ಬಂಧನ

Update: 2022-11-07 01:49 GMT

ಪಾಟ್ನಾ: ಮಾಟಗಾತಿ ಎಂಬ ಶಂಕೆಯಿಂದ ಬಿಹಾರದ ಗಯಾ ಜಿಲ್ಲೆಯಲ್ಲಿ 45 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರವಿವಾರ 14 ಮಂದಿಯನ್ನು ಬಂಧಿಸಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ರೀಟಾ ದೇವಿಯನ್ನು ಅರ್ಜುನ್‍ದಾ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಭಾರತೀಯ ದಂಡಸಂಹಿತೆಯ ಸೆಕ್ಷನ್ 302 ಮತ್ತು 436 ಅನ್ವಯ ಹಾಗೂ ಮಾಟ-ಮಂತ್ರ ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ತಿಂಗಳು ಸುಧೀರ್ಘ ಅಸ್ವಸ್ಥತೆ ಬಳಿಕ ಪರಮೇಶ್ವರ್ ಭೂಯಿಯಾನ್ ಎಂಬಾತ ಗ್ರಾಮದಲ್ಲಿ ಮೃತಪಟ್ಟಿದ್ದ. ಇದಕ್ಕೆ ರೀಟಾ ದೇವಿ ಮಾಟ ಮಾಡಿದ್ದು ಕಾರಣ ಎನ್ನುವುದು ಮೃತ ವ್ಯಕ್ತಿಯ ಕುಟುಂಬದ ಆರೋಪವಾಗಿತ್ತು. ಶನಿವಾರ ಪರಮೇಶ್ವರ್ ಕುಟುಂಬದವರು ಜಾರ್ಖಂಡ್‍ನಿಂದ ಭೂತೋಚ್ಚಾಟಕನನ್ನು ಕರೆಸಿದ್ದರು ಹಾಗೂ ಮಧ್ಯಾಹ್ನ ಪಂಚಾಯ್ತಿ ನಡೆಸಲು ನಿರ್ಧರಿಸಲಾಗಿತ್ತು. ಹಿಂಸಾತ್ಮಕ ಸಂಘರ್ಷದ ಸಾಧ್ಯತೆ ಹಿನ್ನೆಲೆಯಲ್ಲಿ ಭೂತೋಚ್ಚಾಟಕ ಪಲಾಯನ ಮಾಡಿದ್ದ. ತಕ್ಷಣ ಪರಮೇಶ್ವರ್ ಕುಟುಂಬದವರು ಮಹಿಳೆಯ ಮನೆ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆಯನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Similar News