ಪಕ್ಷ ತೊರೆದ ಗುಲಾಂ ನಬಿ ಅವರಿಂದ ಕಾಂಗ್ರೆಸ್ ಗುಣಗಾನ

Update: 2022-11-07 03:56 GMT

ಶ್ರೀನಗರ: ಅಪಾರ ಬೆಂಬಲಿರೊಂದಿಗೆ ಕಾಂಗ್ರೆಸ್ ಪಕ್ಷ ತೊರೆದು ಹೊಸ ಪಕ್ಷ ಕಟ್ಟಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಝಾದ್ (Ghulam Nabi Azad) ರವಿವಾರ ತಮ್ಮ ಮಾಜಿ ಪಕ್ಷವನ್ನು ಗುಣಗಾನ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಒಡ್ಡಲು ಕಾಂಗ್ರೆಸ್ ಮಾತ್ರವೇ ಸಮರ್ಥ ಪಕ್ಷ ಎಂದು ಡೆಮಾಕ್ರೆಟಿಕ್ ಆಝಾದ್ ಪಾರ್ಟಿ (Democratic Azad Party) ಮುಖಂಡ ಅಭಿಪ್ರಾಯಪಟ್ಟಿದ್ದಾರೆ. ಆಮ್ ಆದ್ಮಿ ಪಕ್ಷ ಕೇವಲ ದೆಹಲಿಗೆ ಸೀಮಿತವಾದ ರಾಜಕೀಯ ಪಕ್ಷ ಎಂದು ಅವರು ವಿಶ್ಲೇಷಿಸಿದರು.

ದೋಡಾ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಜಾತ್ಯತೀತ ಪಕ್ಷ ಎಂದು ಹೊಗಳಿದರು. ಕಾಂಗ್ರೆಸ್‍ನ ದುರ್ಬಲ ಪಕ್ಷ ವ್ಯವಸ್ಥೆ ಬಗ್ಗೆ ಮಾತ್ರ ತಮ್ಮ ವಿರೋಧ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‍ನ ಜಾತ್ಯತೀತ ನೀತಿಗೆ ತಾವು ಎಂದೂ ವಿರುದ್ಧ ಇರಲಿಲ್ಲ ಎಂದರು.

ಈಗ ಕೂಡಾ ಕಾಂಗ್ರೆಸ್ ಪಕ್ಷ ಗುಜರಾತ್ ಹಾಗೂ ಹಿಮಾಚಲ ವಿಧಾನಸಭಾ ಚುನಾವಣೆ ಗೆಲ್ಲಬೇಕು ಎಂದೇ ನಾನು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷ ಹಿಂದೂ ಹಾಗೂ ಮುಸ್ಲಿಮರನ್ನು ಜತೆಜತೆಗೆ ಒಯ್ಯುತ್ತಿದೆ ಎಂದು ಬಣ್ಣಿಸಿದರು.

ಆಮ್ ಆದ್ಮಿ ಪಕ್ಷವನ್ನು ಕಟುವಾಗಿ ಟೀಕಿಸಿದ ಅವರು, ಆಪ್ ಪಂಜಾಬ್‍ನಲ್ಲಿ ವಿಫಲವಾಗಿದೆ. ಈ ರಾಜ್ಯಗಳಲ್ಲಿ ಅದು ಏನೂ ಮಾಡಲಾರದು. ಪಂಜಾಬ್ ಜನ ಮತ್ತೆ ಆಮ್ ಆದ್ಮಿಗೆ ಮತ ಹಾಕುವುದಿಲ್ಲ. ಕೇವಲ ಕಾಂಗ್ರೆಸ್ ಮಾತ್ರವೇ ಪಂಜಾಬನ್ನು ದಕ್ಷವಾಗಿ ಮುನ್ನಡೆಸಬಲ್ಲದು ಎಂದರು ಈ ಬಗ್ಗೆ newindianexpress.com ವರದಿ ಮಾಡಿದೆ.

Similar News