×
Ad

ಟಿ-20 ವಿಶ್ವಕಪ್: ಭಾರತ - ಪಾಕಿಸ್ತಾನ ತಂಡಗಳ ನಡುವೆ ಫೈನಲ್ ?

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

Update: 2022-11-07 08:41 IST

ಹೊಸದಿಲ್ಲಿ: ಟಿ-20 ವಿಶ್ವಕಪ್ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, 1ನೇ ಗುಂಪಿನಲ್ಲಿ ನ್ಯೂಝಿಲೆಂಡ್ ಹಾಗೂ ಇಂಗ್ಲೆಡ್ ಅಂತಿಮ ನಾಲ್ಕರ ಹಂತಕ್ಕೆ ಅರ್ಹತೆ ಪಡೆದಿವೆ.

2ನೇ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಅಚ್ಚರಿಯ ಜಯ ಸಾಧಿಸಿದ್ದು ಪಾಕಿಸ್ತಾನಕ್ಕೆ ವರದಾನವಾಗಿದೆ. ಜಿಂಬಾಬ್ವೆ ತಂಡದ ವಿರುದ್ಧ ಸೋತರೂ ಪಾಕಿಸ್ತಾನ ಆಶ್ಚರ್ಯಕರವಾಗಿ ಸೆಮೀಸ್‍ಗೆ ಲಗ್ಗೆ ಇಟ್ಟಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆಘಾತಕಾರಿಯಾಗಿ ಟೂರ್ನಿಯಿಂದ ಹೊರಬಿದ್ದಿದ್ದರೆ, ಕ್ರಮವಾಗಿ 2007 ಹಾಗೂ 2009ರಲ್ಲಿ ವಿಶ್ವಕಪ್ ಗೆದ್ದಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಈ ಬಾರಿ ಫೈನಲ್ ಕದನ ಏರ್ಪಡುತ್ತದೆಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ನವೆಂಬರ್ 9ರಂದು ಸಿಡ್ನಿಯಲ್ಲಿ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಮರುದಿನ ಭಾರತ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಅಡಿಲೇಡ್‍ನಲ್ಲಿ ನಡೆಯಲಿದೆ. ಈ ಹಂತದಲ್ಲಿ ಏಷ್ಯಾದ ಎರಡು ತಂಡಗಳು ಗೆಲುವು ಸಾಧಿಸಿದರೆ 13ರಂದು ನಡೆಯುವ ಫೈನಲ್, ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಲಿದೆ.

ಭಾರತ- ಪಾಕಿಸ್ತಾನ ಫೈನಲ್ ಸಾಧ್ಯತೆಯನ್ನು ಎದುರು ನೋಡುತ್ತಿರುವ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ, ಹಲವು ರೋಚಕ ತಿರುವುಗಳ ಟೂರ್ನಿ ಮತ್ತೊಂದು ಥ್ರಿಲ್ಲರ್‍ಗೆ ಸಾಕ್ಷಿಯಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News