ಇಕ್ವಟೋರಿಯಲ್ ಗಿನಿಯಾದಲ್ಲಿ ಬಂಧಿತ 26 ನಾವಿಕರಲ್ಲಿ ಮೂವರು ಕೇರಳೀಯರು

Update: 2022-11-07 17:52 GMT

ಮಲಾಬೊ, ನ.7: ಮಧ್ಯ ಆಫ್ರಿಕಾ(Africa)ದ ಇಕ್ವಟೋರಿಯಲ್ ಗಿನಿಯಾ ದೇಶದ ಅಧಿಕಾರಿಗಳು ವಶಕ್ಕೆ ಪಡೆದಿರುವ ನಾರ್ವೆ(Norway)ಯ ತೈಲ ನೌಕೆಯಲ್ಲಿದ್ದ 26 ನಾವಿಕರಲ್ಲಿ ಮೂವರು ಕೇರಳ(Kerala)ದ ಪ್ರಜೆಗಳು ಎಂದು ವರದಿಯಾಗಿದೆ.

ಕಚ್ಛಾತೈಲ ಕಡಲ್ಗಳ್ಳತನದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಕಚ್ಛಾ ತೈಲವನ್ನು ತುಂಬಲು ಆಗಸ್ಟ್ 8ರಂದು ನೈಜೀರಿಯಾದ ಎಕೆಪಿಒ ಟರ್ಮಿನಲ್ ಅನ್ನು ತಲುಪಿದ ನಾರ್ವೆಯ ಹಡಗು ಅಲ್ಲಿಂದ ಪ್ರಯಾಣ ಮುಂದುವರಿಸಿದಾಗ ಗಿನಿಯಾ ನೌಕಾಪಡೆಯ ಅಧಿಕಾರಿಗಳು ತಡೆದರು. ಬಿಡುಗಡೆಗೆ 2 ಲಕ್ಷ ಡಾಲರ್ ಹಣ ಪಾವತಿಸುವುದಾಗಿ ನಾರ್ವೆ ಹಡಗಿನ ಮಾಲಕರು ಹೇಳಿದರೂ ನಾರ್ವೆ ಅಧಿಕಾರಿಗಳು ಒಪ್ಪಲಿಲ್ಲ ಎಂದು ವರದಿಯಾಗಿದೆ.

 ಹಡಗನ್ನು ವಶಕ್ಕೆ ಪಡೆಯುವಲ್ಲಿ ನೈಜೀರಿಯಾ ಅಧಿಕಾರಿಗಳ ಕೈವಾಡ ಇರಬಹುದು ಮತ್ತು ಹಡಗನ್ನು ನೈಜೀರಿಯಾ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಆತಂಕವಿದೆ ಎಂದು ಬಂಧಿತ ನಾವಿಕರಲ್ಲಿ ಒಬ್ಬರಾದ ನೌಕೆಯ ನ್ಯಾವಿಗೇಟಿಂಗ್ ಅಧಿಕಾರಿ, ಕೊಲ್ಲಂನ ಸಾಸ್ಥಾಂಕೊಟ್ಟ ನಿವಾಸಿ ವಿಜಿತ್ ಹೇಳಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಅವರು, ಸಮುದ್ರದಲ್ಲಿ ನಮ್ಮ ಹಡಗಿನ ಬಳಿ ನೈಜೀರಿಯಾದ ನೌಕೆ ಲಂಗರು ಹಾಕಿದ್ದು ಮುಂದೇನಾಗುತ್ತದೆಯೋ ಎಂಬ ಆತಂಕ ನಮಗಿದೆ. ಈ ವಿಷಯದಲ್ಲಿ ಭಾರತ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಭಾರತ ಸರಕಾರ ಗಿನಿಯಾದಲ್ಲಿ ಬಂಧಿತ ಭಾರತೀಯ ನಾವಿಕರನ್ನು ಭಾರತಕ್ಕೆ ಮರಳಿ ಕರೆತರಲಿದೆ. ನಾವಿಕರನ್ನು ನೈಜೀರಿಯಾ ನೌಕಾಪಡೆಗೆ ಹಸ್ತಾಂತರಿಸುವುದನ್ನು ತಡೆಯಲು ಸಚಿವಾಲಯದ ಅಧಿಕಾರಿಗಳಿ ಅಲ್ಲಿನ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ ಮುರಳೀಧರನ್ ತಿರುವನಂತಪುರಂನಲ್ಲಿ ಹೇಳಿದ್ದಾರೆ.

Similar News