×
Ad

ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯಾಘಾತದಿಂದ ಪಕ್ಷದ ನಾಯಕ ನಿಧನ; ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್

Update: 2022-11-08 14:24 IST

ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಂಗಳವಾರ  ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಕಾಂಗ್ರೆಸ್ ನಾಯಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

75 ವರ್ಷದ ಕೃಷ್ಣ ಕುಮಾರ್ ಪಾಂಡೆ ಅವರು ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ  ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

"ಭಾರತ್ ಜೋಡೋ ಯಾತ್ರೆಯ ಈ 62 ನೇ ದಿನದ ಬೆಳಿಗ್ಗೆ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಪಾಂಡೆ ಅವರು ರಾಷ್ಟ್ರಧ್ವಜವನ್ನು ಹಿಡಿದು ದಿಗ್ವಿಜಯ್ ಹಾಗೂ  ನನ್ನೊಂದಿಗೆ ನಡೆಯುತ್ತಿದ್ದರು. ಕೆಲವು ನಿಮಿಷಗಳ ನಂತರ, ಕ್ರಮ ಪ್ರಕಾರ ಅವರು ಸಹೋದ್ಯೋಗಿಗೆ ಧ್ವಜವನ್ನು ಹಸ್ತಾಂತರಿಸಿದರು. ಆಗಲೇ  ಕುಸಿದು ಬಿದ್ದರು...," ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಲಾಗಲಿಲ್ಲ ಎಂದು ರಮೇಶ್ ತಿಳಿಸಿದ್ದಾರೆ.

 "ಪಾಂಡೆ ಅವರು ಕಟ್ಟಾ ಕಾಂಗ್ರೆಸಿಗರಾಗಿದ್ದರು ಮತ್ತು ನಾಗಪುರದಲ್ಲಿ ಆರೆಸ್ಸೆಸ್  ಅನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಇದು ಎಲ್ಲಾ ಯಾತ್ರಿಗಳಿಗೆ ಅತ್ಯಂತ ವಿನಮ್ರ ಕ್ಷಣವಾಗಿದೆ" ಎಂದು ಪಕ್ಷದ ಬೆಂಬಲಿಗರು ಮೃತಪಟ್ಟ ಪಾಂಡೆಗೆ ಗೌರವ ಸಲ್ಲಿಸಲು ಮೌನಾಚರಣೆ ನಡೆಸುತ್ತಿರುವ ವೀಡಿಯೊದೊಂದಿಗೆ ಕಾಂಗ್ರೆಸ್ ನಾಯಕ ಟ್ವೀಟಿಸಿದ್ದಾರೆ.

ಪಾಂಡೆ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ಭಾರತ್ ಜೋಡೊ ಯಾತ್ರೆಯ ನೇತೃತ್ವವಹಿಸಿರುವ ರಾಹುಲ್  ಗಾಂಧಿ,"ಪಾಂಡೆ ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿದ್ದರು. ದೇಶಕ್ಕಾಗಿ ಅವರ ಸಮರ್ಪಣೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಫೂರ್ತಿ ನೀಡುತ್ತದೆ'' ಎಂದರು.

ಪಕ್ಷದ ನಾಯಕ ಕೃಷ್ಣ ಕುಮಾರ್ ಪಾಂಡೆ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ ಹಾಗೂ  ಅಂತಹ ಸಮರ್ಪಿತ ನಾಯಕನನ್ನು ಕಳೆದುಕೊಂಡಿರುವುದು ಪಕ್ಷಕ್ಕೆ "ಭರಿಸಲಾಗದ ಹಾನಿ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Similar News