ಎಐಎಂಐಎಂ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ: ಆರೋಪ

Update: 2022-11-08 10:05 GMT

ಸೂರತ್(ಗುಜರಾತ್): ಎಐಎಂಐಎಂ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ಚುನಾವಣೆ ಪ್ರಚಾರ ನಿಮಿತ್ತ ಗುಜರಾತ್‌ಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ವಕ್ತಾರರು ಆರೋಪಿಸಿದ್ದಾರೆ.

ಆದಾಗ್ಯೂ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ ಹಾಗೂ ಸೋಮವಾರ ನಡೆದ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಸೋಮವಾರ ಸಂಜೆ ರೈಲು ಸೂರತ್‌ಗೆ ತಲುಪುವ ಮುನ್ನ ಈ ಘಟನೆ ನಡೆದಿದೆ.  ಹೈದರಾಬಾದ್‌ನ ಲೋಕಸಭಾ ಸದಸ್ಯ ಉವೈಸಿ ಅವರು ಡಿಸೆಂಬರ್ 1 ಮತ್ತು 5 ರಂದು ವಿಧಾನಸಭಾ ಚುನಾವಣೆ ನಡೆಯುವ ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಸೂರತ್ ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದರು ಎಂದು ಎಐಎಂಐಎಂ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಹೇಳಿದ್ದಾರೆ.

ಪಠಾಣ್ ಅವರು ತಮ್ಮ ಆರೋಪವನ್ನು ಸಾಬೀತುಪಡಿಸಲು ತನ್ನ ಬಳಿ ಕೆಲವು ಫೋಟೋಗಳಿವೆ ಎಂದು ಹೇಳಿದರು.

"ಅಸದುದ್ದೀನ್  ಉವೈಸಿ ಸಾಹೇಬ್,  ಕಬ್ಲಿವಾಲಾ ಸರ್, ನಾನು ಹಾಗೂ  ಎಐಎಂಐಎಂ ತಂಡವು ಅಹಮದಾಬಾದ್‌ನಿಂದ ಸೂರತ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ರೈಲಿಗೆ ಕಲ್ಲು ತೂರಾಟ ನಡೆಸಿ ಅದರ ಗಾಜು ಒಡೆದಿದ್ದಾರೆ" ಎಂದು ಪಠಾಣ್  ಹೇಳಿದ್ದಾರೆ.

ಆದಾಗ್ಯೂ, ಭರೂಚ್ ಜಿಲ್ಲೆಯ ಅಂಕಲೇಶ್ವರ ಬಳಿ ಹಳಿಯಲ್ಲಿ ನಡೆಯುತ್ತಿರುವ ಇಂಜಿನಿಯರಿಂಗ್ ಕೆಲಸದಿಂದಾಗಿ ರೈಲಿನ ಗಾಜಿನ ಕಿಟಕಿಗೆ ಕೆಲವು "ಗ್ರಿಟ್" ಹೊಡೆದಿದೆ ಎಂದು ಪಶ್ಚಿಮ ರೈಲ್ವೆಯ ಪೊಲೀಸ್ ಅಧೀಕ್ಷಕ ರಾಜೇಶ್ ಪರ್ಮಾರ್ ಮಂಗಳವಾರ ಹೇಳಿದ್ದಾರೆ.

"ಇದು ಕಲ್ಲು ತೂರಾಟದ ಪ್ರಕರಣವಲ್ಲ.  ಉವೈಸಿ ಕಿಟಕಿಯಿಂದ ದೂರ ಕುಳಿತಿದ್ದರು.  ಒಡೆದ ಕಿಟಕಿಯನ್ನು ಬದಲಾಯಿಸಲಾಗಿದ್ದು, ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್ಪಿ) ಮಟ್ಟದ ಅಧಿಕಾರಿ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

Similar News