ಚುನಾವಣೆ ದೃಷ್ಟಿಯಲ್ಲಿಟ್ಟು ಬಿಜೆಪಿಯೇ ಶಿವಸೇನೆ ನಾಯಕನನ್ನು ಹತ್ಯೆಗೈದಿದೆ: ಸಂಸದ ಸಿಮ್ರಂಜಿತ್ ಸಿಂಗ್ ಮಾನ್

Update: 2022-11-08 16:24 GMT

ಸಂಗ್ರೂರ್: ಶಿವಸೇನೆ ಮುಖಂಡ ಸುಧೀರ್ ಸೂರಿ ಹತ್ಯೆ ಅಮೃತಸರದಲ್ಲಿ ರಾಜಕೀಯ ಕೋಲಾಹಲಕ್ಕೆ ನಾಂದಿ ಹಾಡಿದ್ದು, ಪ್ರಕರಣದ ಬಗ್ಗೆ ರಾಜಕೀಯ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿವೆ. ನವೆಂಬರ್ 4ರಂದು ಗೋಪಾಲ ಮಂದಿರದ ಎದುರು ನಡೆದ ಪ್ರತಿಭಟನೆ ವೇಳೆ ಜನನಿಬಿಡ ರಸ್ತೆಯಲ್ಲಿ ಸುಧೀರ್ ಹತ್ಯೆಯಾಗಿದ್ದರು.

ಅವರ ಭೀಕರ ಹತ್ಯೆಯ ನಂತರ, ಆಮ್ ಆದ್ಮಿ ಪಕ್ಷದ (ಎಎಪಿ) ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆಯೆಂದು ಟೀಕೆ ಎದುರಿಸುತ್ತಿದೆ. ಮತ್ತೊಂದೆಡೆ, ಖಲಿಸ್ತಾನ್ ಪರ ಸಂಘಟನೆಯಾದ ಜಸ್ಟೀಸ್ ಲೀಗ್ ಇಂಡಿಯಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಗ್ರೂರ್ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಬಿಜೆಪಿ ವಿರುದ್ಧ ಆರೋಪ ಹೊರಿಸಿದ್ದು, ಸುಧೀರ್ ಸೂರಿ ಹತ್ಯೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧವಿದೆ. ಅನುಕಂಪದ ಮತ ಗಳಿಸಲು ಬಿಜೆಪಿ ಹತ್ಯೆಗೆ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.

"ಆರೆಸ್ಸೆಸ್ ಮತ್ತು ಬಿಜೆಪಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಯೋಜಿಸಿರುವ ಸಾಧ್ಯತೆಯಿದೆ, ಅಲ್ಲಿ ಎಎಪಿ ಕೂಡ ಸ್ಪರ್ಧಿಸುತ್ತಿದೆ. ಅವರು ಗುಜರಾತ್ ಮತ್ತು ಹಿಮಾಚಲ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಸಿಮ್ರಂಜಿತ್ ಸಿಂಗ್ ಮಾನ್ ಹೇಳಿದ್ದಾರೆ.

ಈ ನಡುವೆ, ಖಲಿಸ್ತಾನಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (SFJ) ಶೂಟರ್ ಸಂದೀಪ್ ಸಿಂಗ್‌ಗೆ ಕಾನೂನು ಸಹಾಯಕ್ಕಾಗಿ 10 ಲಕ್ಷ ರೂಪಾಯಿಯನ್ನು ಬಹಿರಂಗವಾಗಿ ನೀಡಿದೆ ಎಂದು ವರದಿಯಾಗಿದೆ.

“ಸುಧೀರ್ ಸೂರಿ ಸಿಖ್ಖರ ನರಮೇಧಕ್ಕೆ ಯತ್ನಿಸುತ್ತಿದ್ದಾನೆ. ಸಂದೀಪ್ ಸಿಂಗ್ ಎಂಬ ಸಿಖ್ ಅವರನ್ನು ಕೊಂದ ಆರೋಪವಿದೆ. ರಾಜಕೀಯ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಾಗ ಅದು ಭಯೋತ್ಪಾದನೆ ಅಲ್ಲ ಎಂದು ಹೇಳುವುದು ಅತ್ಯಗತ್ಯ. ಸಂದೀಪ್ ಸಿಂಗ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿಲ್ಲ. ಅವರು ಅಮೃತಸರ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಮಾಡಿಲ್ಲ. ಅವರು ಐದು ಗುಂಡುಗಳನ್ನು ಹಾರಿಸಿದರು ಮತ್ತು ಎಲ್ಲಾ ಗುಂಡುಗಳು ಸಿಖ್ಖರ ನರಮೇಧವನ್ನು ಒತ್ತಾಯಿಸಿದ ಸುಧೀರ್ ಸೂರಿಗೆ ಹೊಡೆದವು” ಎಂದು ವಿಡಿಯೋದಲ್ಲಿ ಹೇಳಿರುವುದಾಗಿ timesnownews.com ವರದಿ ಮಾಡಿದೆ.

ಹತ್ಯೆಯ ತನಿಖೆಗಾಗಿ ಪಂಜಾಬ್ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಘಟನೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಮೃತಸರ ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್, "ಸುಧೀರ್ ಸೂರಿ ಹತ್ಯೆಯ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಸನ್ನಿ (ಆರೋಪಿ) ಬಂಧನದಲ್ಲಿದ್ದಾರೆ ಮತ್ತು ಅಪರಾಧದ ಆಯುಧವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಎಸ್‌ಐಟಿ ಯಾರನ್ನೂ ಬಿಡುವುದಿಲ್ಲ. ನಾವು ಪಿತೂರಿಯನ್ನು ಬಿಚ್ಚಿಡುತ್ತೇವೆ" ಎಂದು ಹೇಳಿದ್ದಾರೆ.

Similar News