ಹೆಬ್ರಿ ಸರಕಾರಿ ಕಾಲೇಜಿನಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ
ಉಡುಪಿ : ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಯಿತು.
ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಆಚಾರ್ಯ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಸಮಾನತೆ ಸಾಧ್ಯ. ಅವಕಾಶ ವಂಚಿತ ಸಮುದಾಯಗಳ ವ್ಯಕ್ತಿಗಳನ್ನು ಮುಖ್ಯ ಭೂಮಿಕೆಗೆ ಕರೆ ತರುವಲ್ಲಿ ಶಿಕ್ಷಣದ ಪಾತ್ರ ಮಹತ್ವ. ಶಿಕ್ಷಣದಿಂದ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಪ್ರತಿಯೊಬ್ಬರಲ್ಲೂ ಆತ್ಮಾಭಿಮಾನ ಜಾಗೃತಗೊಳಿಸಬೇಕು. ಸಮಾಜದಲ್ಲಿರುವ ಅನ್ಯಾಯಗಳ ವಿರುದ್ಧ ಹೋರಾಡು ವಂತಾಗಬೇಕು. ಕೇವಲ ದೇವರದೃಷ್ಟಿಯಲ್ಲಿ ಎಲ್ಲರೂ ಸಮಾನರಾದರೆ ಸಾಲದು. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಬೇಕು ಎಂದರು.
ಹೆಬ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್ ಎಚ್. ಕಾರ್ಯಕ್ರಮ ಉದ್ಘಾಟಿಸಿದರು. ಅಂಬೇಡ್ಕರ್ ಚಿಂತನೆಗಳ ಪ್ರಸ್ತುತಿ ಹಾಗೂ ಡಾ.ಬಿ.ಆರ್‌ಅಂಬೇಡ್ಕರ್ ಚಿಂತನೆಗಳ ಕುರಿತು ನಡೆದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷಿತಾ, ನರಸಿಂಹ, ಪ್ರತಿಭಾ ಹಾಗೂ ನಂದನ್ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ್‌ರಾವ್ ಎಂ, ಡಾ.ಬಿ.ಆರ್‌ಅಂಬೇಡ್ಕರ್ ಚಿಂತನೆಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಿತಾ ಕೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿಷ್ಣ್ಣುಮೂರ್ತಿ ಪ್ರಭು ವಂದಿಸಿದರು.