ಪಡುಬಿದ್ರೆ: ಅಂಗನವಾಡಿ ಕಾರ್ಯಕರ್ತೆಯ ಸರ ಸುಲಿಗೆ
Update: 2022-11-08 21:31 IST
ಪಡುಬಿದ್ರೆ: ವಿಳಾಸ ಕೇಳುವ ನೆಪದಲ್ಲಿ ಅಪರಿಚಿತ ಯುವಕರಿಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ 9ಗಂಟೆಯ ಸುಮಾರಿಗೆ ಇನ್ನಾ ಹೊಸಕಾಡು ಎಂಬಲ್ಲಿ ನಡೆದಿದೆ.
ಇನ್ನಾ ಗ್ರಾಮ ಕುರ್ಕಿಲಬೆಟ್ಟುವಿನ ಅಂಗನವಾಡಿಯ ಕಾರ್ಯಕರ್ತೆ, ಹೊಸಕಾಡು ನಿವಾಸಿ ರೇಖಾ (40) ಎಂಬವರು ಸ್ಕೂಟಿಯಲ್ಲಿ ಮನೆಯಿಂದ ಅಂಗನವಾಡಿಗೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಹೋಗುತ್ತಿದ್ದರು. ದಾರಿ ಮಧ್ಯೆ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ, ರೇಖಾ ಅವರ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಪರಾರಿ ಯಾದರು ಎಂದು ದೂರಲಾಗಿದೆ. ಇದರ ಮೌಲ್ಯ 1,44,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.