×
Ad

ಸಂಸದೆ ಸುಪ್ರಿಯಾ ಸುಲೆ ನಿಂದನೆ: ಮಹಾರಾಷ್ಟ್ರ ಸಚಿವ ಅಬ್ದುಲ್ ಸತ್ತಾರ್ ರಾಜೀನಾಮೆಗೆ ಎನ್‌ಸಿಪಿ ಆಗ್ರಹ

Update: 2022-11-08 22:31 IST

ಮುಂಬೈ, ನ.8: ಪಕ್ಷದ ಸಂಸದೆ ಸುಪ್ರಿಯಾ ಸುಲೆ ಅವರನ್ನು ನಿಂದಿಸಿದ್ದಕ್ಕಾಗಿ ಎನ್‌ಸಿಪಿ ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ.

ಔರಂಗಾಬಾದ್ ನಗರದಲ್ಲಿ ಸುಳೆಯವರ ಕುರಿತು ಮಾತನಾಡಿದ ಸಂದರ್ಭ ಸತ್ತಾರ್ ಭಿಕ್ಷುಕನಿಗಾಗಿರುವ ಅವಹೇಳನಕಾರಿ ಶಬ್ದವನ್ನು ಬಳಸಿದ್ದರು ಎನ್ನಲಾಗಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣಕ್ಕೆ ಸೇರಿದ ಶಿವಸೇನೆ ಶಾಸಕರು ಬಿಜೆಪಿಯನ್ನು ಬೆಂಬಲಿಸಲು ಹಣವನ್ನು ಪಡೆದಿದ್ದರು ಎಂಬ ಆರೋಪಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಸೋಮವಾರ ಎನ್‌ಸಿಪಿ ಕಾರ್ಯಕರ್ತರು ಮುಂಬೈನ ಸತ್ತಾರ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. ಶಿಂಧೆಯವರು ರಾಜೀನಾಮೆ ನೀಡುವಂತೆ ಕೃಷಿ ಸಚಿವರಿಗೆ ಸೂಚಿಸಬೇಕು ಎಂದು ಎನ್‌ಸಿಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿದ್ಯಾ ಚವಾಣ ಆಗ್ರಹಿಸಿದ್ದರು.

ಶಿವಸೇನೆ ನಾಯಕಿ ಸುಷ್ಮಾ ಅಂಧಾರೆಯವರನ್ನು ‘ಹಿರೋಯಿನ್’ ಎಂದು ಪ್ರಸ್ತಾಪಿಸುವ ಮೂಲಕ ಅವರನ್ನು ಅವಮಾನಿಸಿರುವ ಸಚಿವ ಗುಲಾಬರಾವ್ ಪಾಟೀಲ್ ಅವರೂ ರಾಜೀನಾಮೆ ನೀಡಬೇಕು ಎಂದೂ ಚವಾಣ ಆಗ್ರಹಿಸಿದ್ದರು.

ಸೋಮವಾರ ಸಂಜೆ ಸತ್ತಾರ್ ತನ್ನ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದರಾದರೂ,ಮಹಿಳೆಯರ ಭಾವನೆಗಳಿಗೆ ನೋವುಂಟು ಮಾಡುವುದು ತನ್ನ ಉದೇಶವಾಗಿರಲಿಲ್ಲ ಎಂದು ಹೇಳಿದ್ದಾರೆ.

Similar News