ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ರಕ್ತ ಮಾನವರಿಗೆ ವರ್ಗಾವಣೆ: ಬ್ರಿಟನ್ನಲ್ಲಿ ವೈದ್ಯಕೀಯ ಪ್ರಯೋಗ

Update: 2022-11-08 18:51 GMT

ಲಂಡನ್, ನ.8: ಬ್ರಿಟನ್ನಲ್ಲಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ರಕ್ತವನ್ನು ಮನುಷ್ಯರಿಗೆ ವರ್ಗಾಯಿಸಲಾಗಿದ್ದು ಇದು ಕೃತಕ ರಕ್ತದ ಪ್ರಪ್ರಥಮ ಕ್ಲಿನಿಕಲ್ ಪ್ರಯೋಗವಾಗಿದೆ. ರಕ್ತದ ಅಸ್ವಸ್ಥತೆ ಮತ್ತು ಅಪರೂಪದ ವರ್ಗದ ರಕ್ತ ಹೊಂದಿರುವ ವ್ಯಕ್ತಿಗಳಿಗೆ ಇದೊಂದು ವರದಾನವಾಗಲಿದೆ ಎಂದು ಬ್ರಿಟನ್ ಹೇಳಿದೆ.  

ಪ್ರಯೋಗಾಲಯದಲ್ಲಿ ಅಭಿವೃದ್ಧಿಗೊಳಿಸಿದ ರಕ್ತವನ್ನು ಬ್ರಿಟನ್ನ ಇಬ್ಬರು ರೋಗಿಗಳಿಗೆ 2 ಚಮಚದಷ್ಟು ನೀಡಲಾಗಿದ್ದು ಮನುಷ್ಯನ ದೇಹದಲ್ಲಿ ಈ ರಕ್ತ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರಿಶೀಲಿಸುವುದು ಇದರ ಉದ್ದೇಶವಾಗಿದೆ. ಕೆಂಪು ರಕ್ತ ಕಣದ ಜೀವಿತಾವಧಿ ಹಾಗೂ ಪ್ರಯೋಗಾಲಯದಲ್ಲಿ ಬೆಳೆಸಿದ ರಕ್ತಕಣದ ಜೀವಿತಾವಧಿಯನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ   ಮುಂದಿನ ಹಲವು ತಿಂಗಳಲ್ಲಿ ಆರೋಗ್ಯವಂತ 10 ಸ್ವಯಂಸೇವಕರಿಗೆ ಇದನ್ನು ಪ್ರಯೋಗಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ರಕ್ತದಾನ ಪ್ರಕ್ರಿಯೆಗೆ ಪರ್ಯಾಯವಾಗಿ ಪ್ರಯೋಗಾಲಯದಲ್ಲಿ ರಕ್ತದ ಕಣವನ್ನು ಬೆಳೆಸಿಲ್ಲ. ಈ ಪ್ರಕ್ರಿಯೆಯ ಅಂತಿಮ ಉದ್ದೇಶವೆಂದರೆ ಅತೀ ಅಪರೂಪವಾದ ವರ್ಗದ ರಕ್ತಕಣವನ್ನು ಉತ್ಪಾದಿಸುವುದಾಗಿದೆ ಎಂದು ಬ್ರಿಟನ್ನ ಸಂಶೋಧಕರು ಹೇಳಿದ್ದಾರೆ. 

ಬ್ರಿಸ್ಟಲ್, ಕೇಂಬ್ರಿಡ್ಜ್ ಮತ್ತು ಲಂಡನ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸಂಶೋಧನೆಯು ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತಕಣದ ಮೇಲೆ ಕೇಂದ್ರೀಕರಿಸಿದೆ. ಈ ರಕ್ತಕಣ ದೇಹದಲ್ಲಿ ಎಷ್ಟು ಸಮಯ ಉಳಿಯುತ್ತದೆ ಎಂಬುದನ್ನು ಎಂಬುದನ್ನು ಮೇಲ್ವಿಚಾರಣೆ ನಡೆಸಲು ಈ ರಕ್ತಕಣಕ್ಕೆ ವಿಕಿರಿಣಶೀಲ ವ್ಯವಸ್ಥೆಯನ್ನು ಹೊಂದಿಸಲಾಗಿದೆ. ರಕ್ತ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಿಸುವ ರೋಗಿಗಳಿಗೆ ಈ ಸಂಶೋಧನೆ ಬಹಳ ಮಹತ್ವದ್ದಾಗಲಿದೆ ಎಂದು ಬ್ರಿಟನ್ನ  ಎನ್ಎಚ್ಎಸ್  ರಕ್ತ ಮತ್ತು ಕಸಿ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಫಾರುಕ್ ಶಾರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

Similar News