ಇಂದು ಉದ್ಯೋಗ ಕಡಿತ ಆರಂಭಿಸಲಿರುವ ಫೇಸ್ಬುಕ್‌: ಶೇ. 10 ರಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಭೀತಿ

Update: 2022-11-09 06:19 GMT

ಕ್ಯಾಲಿಫೋರ್ನಿಯಾ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್‌ (Facebook) ಇದರ ಮಾತೃ ಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್‌ ಇಂಕ್.‌ (Meta Platforms Inc.) ಇಂದು ಬೆಳಗ್ಗಿನಿಂದ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಲಿದೆ ಎಂದು ವರದಿಗಳು ತಿಳಿಸಿವೆ. ಈ ಸಂಸ್ಥೆಯ ಏರುತ್ತಿರುವ ಖರ್ಚುವೆಚ್ಚಗಳು ಜೊತೆಗೆ ಇಳಿಕೆಯಾಗಿರುವ ಆದಾಯವನ್ನು ಸರಿದೂಗಿಸುವ ಕ್ರಮವಾಗಿ ಮೆಟಾ ಉದ್ಯೋಗ ಕಡಿತಗಳಿಗ ಮುಂದಾಗಿದೆ.

ಉದ್ಯೋಗ ಕಳೆದುಕೊಳ್ಳಲಿರುವವರಿಗೆ ಇಂದು ಬೆಳಗ್ಗಿನಿಂದ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಫೇಸ್ಬುಕ್‌ ಸಿಇಒ ಮಾರ್ಕ್‌ ಝುಕರ್ ಬರ್ಗ್‌ (Mark Zuckerberg) ಅವರು ಮಂಗಳವಾರ ಕಂಪೆನಿಯ ಉನ್ನತ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಉದ್ಯೋಗ ಕಡಿತಗಳಿಗೆ ಸಿದ್ಧರಾಗುವಂತೆ ಸೂಚಿಸಿದ್ದಾರೆ. ಕಂಪೆನಿ ಯಾವುದೇ ತಪ್ಪು ಕ್ರಮಕೈಗೊಂಡರೆ ಅದಕ್ಕೆ ತಾವೇ ಜವಾಬ್ದಾರ ಎಂದೂ ಝುಕರ್ ಬರ್ಗ್‌ ಹೇಳಿದ್ದಾರೆಂದು ವರದಿಯಾಗಿದೆ.

ಉದ್ಯೋಗ ಕಡಿತದ ಸುಳಿವನ್ನು ಝುಕೆರ್ಬರ್ಗ್‌ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಉದ್ಯೋಗಿಗಳಿಗೆ ನೀಡಿದ್ದರಲ್ಲದೆ ಸಂಸ್ಥೆ ಹೊಸ ನೇಮಕಾತಿಗಳಿಗೂ ತಡೆ ಹೇರಿತ್ತು.

ಇಂದು ಆರಂಭವಾಗಲಿರುವ ಫೇಸ್ಬುಕ್‌ ಲೇ-ಆಫ್‌ಗಳು ಕಂಪೆನಿಯ ಶೇ 10 ರಷ್ಟು ಉದ್ಯೋಗಿಗಳನ್ನು ಬಾಧಿಸುವ ಸಾಧ್ಯತೆಯಿದೆ. ಸಂಸ್ಥೆಯಲ್ಲಿ ಒಟ್ಟು 87,000 ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.

ಕಳೆದ ವಾರವಷ್ಟೇ ಎಲಾನ್‌ ಮಸ್ಕ್‌ ಒಡೆತನದ ಟ್ವಿಟರ್‌ ತನ್ನ ಸುಮಾರು ಶೇ. 50 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.

ಇದನ್ನೂ ಓದಿ: ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ. ಚಂದ್ರಚೂಡ್ ಅಧಿಕಾರ ಸ್ವೀಕಾರ

Similar News