ಮುಲಾಯಂ ಸಿಂಗ್ ನಿಧನದಿಂದ ತೆರವಾದ ಕ್ಷೇತ್ರದಿಂದ ಸೊಸೆ ಡಿಂಪಲ್ ಯಾದವ್ ಸ್ಪರ್ಧೆ

Update: 2022-11-10 13:55 GMT

ಲಕ್ನೊ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ, ಮಾಜಿ ಸಂಸದೆ ಡಿಂಪಲ್ ಯಾದವ್ ಅವರು ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾಗಿರುವ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು NDTV ವರದಿ ಮಾಡಿದೆ.

ಡಿಸೆಂಬರ್ 5 ರಂದು ಹಲವು ರಾಜ್ಯಗಳಲ್ಲಿ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಜೊತೆಗೆ ಮೈನ್‌ಪುರಿ  ಸಂಸದೀಯ ಸ್ಥಾನಕ್ಕಾಗಿ ಸ್ಪರ್ಧೆ ನಡೆಯಲಿದೆ. ಡಿಸೆಂಬರ್ 8 ರಂದು ಗುಜರಾತ್ ಹಾಗೂ  ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶದ ಜೊತೆಗೆ ಈ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಎಸ್‌ಪಿ ಸಂಸ್ಥಾಪಕ ಹಾಗೂ  ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ  ಮುಲಾಯಂ ಸಿಂಗ್ ಯಾದವ್ ಅಕ್ಟೋಬರ್ 10 ರಂದು ದೀರ್ಘಕಾಲದ ಅನಾರೋಗ್ಯದಿಂದ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಲಾಯಂ ನಿಧನದಿಂದ ಮೈನ್‌ಪುರಿ ಸಂಸದೀಯ ಕ್ಷೇತ್ರ ತೆರವಾಗಿದೆ.

2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ  ಮುಲಾಯಂ ಸಿಂಗ್ ಯಾದವ್ ಅವರು ವೃತ್ತಿಜೀವನದಲ್ಲಿ ಕಡಿಮೆ ಅಂತರದಿಂದ (94,000 )ಬಿಜೆಪಿ ಪ್ರತಿಸ್ಪರ್ಧಿ ವಿರುದ್ಧ ಜಯ ಸಾಧಿಸಿದ್ದರು.

Similar News