ಫಡ್ನವೀಸ್‌ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ: ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಸಂಜಯ್‌ ರಾವತ್‌

ಶೀಘ್ರ ಪ್ರಧಾನಿ ಮೋದಿ, ಅಮಿತ್‌ ಶಾ ಭೇಟಿಯಾಗುವೆ ಎಂದ ಶಿವಸೇನೆ ನಾಯಕ

Update: 2022-11-10 10:49 GMT

ಮುಂಬೈ: ಪತ್ರಾ ಚಾವ್ಲ್‌ ಮರುಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮೂರು ತಿಂಗಳ ನಂತರ ಬುಧವಾರ ಜಾಮೀನಿನ ಮೇಲೆ ಬಿಡುಗಡೆಗೊಂಡ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ನಾಯಕ ಸಂಜಯ್‌ ರಾವತ್‌ (Sanjay Raut), ತಾನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis) ಅವರು ತೆಗೆದುಕೊಂಡ ಕೆಲ ಉತ್ತಮ ನಿರ್ಧಾರಗಳನ್ನು ಸ್ವಾಗತಿಸುವುದಾಗಿ ಹೇಳಿದರಲ್ಲದೆ ಶೀಘ್ರದಲ್ಲಿಯೇ ಫಡ್ನವೀಸ್‌, ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿಯಾಗಿ ಕಳೆದ 100 ದಿನಗಳಲ್ಲಿ ಅನುಭವಿಸಿದ್ದ ಪಾಡನ್ನು ವಿವರಿಸಲಿರುವುದಾಗಿ ತಿಳಿಸಿದರು.

ಭಾಂಡುಪ್‌ನ ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಮಗೆ ಯಾರ ವಿರುದ್ಧವೂ ದ್ವೇಷವಿಲ್ಲ ಎಂದರು. ʻʻನಾನು ಕೇಂದ್ರ ಏಜನ್ಸಿಗಳು ಅಥವಾ ಕೇಂದ್ರದ ವಿರುದ್ಧ ಮಾತನಾಡುವುದಿಲ್ಲ. ನಾನು ಕಷ್ಟ ಅನುಭವಿಸಿದ್ದೇನೆ. ವಿರೋಧಿಸಬೇಕೆಂಬ ಒಂದೇ ಕಾರಣಕ್ಕೆ ವಿರೋಧಿಸುವುದಿಲ್ಲ. ಅವರು ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಸ್ವಾಗತಿಸಬೇಕು. ಉಪಮುಖ್ಯಮಂತ್ರಿ ಫಡ್ನವೀಸ್‌ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅವರನ್ನು ಶೀಘ್ರ ಭೇಟಿಯಾಗುತ್ತೇನೆ. ರಾಜಕಾರಣಿಗಳ ನಡುವೆ ವೈರತ್ವ ಇರಬಾರದೆಂಬ ಫಡ್ನವೀಸ್‌ ಮಾತನ್ನು ಒಪ್ಪುತ್ತೇನೆ,ʼʼ ಎಂದು ರಾವತ್‌ ಹೇಳಿದರು.

ಮುಖ್ಯಮಂತ್ರಿ ಏಕನಾಥ್‌ ಶಿಂಧೆಯನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ʻʻಉತ್ತಮ ನಿರ್ಧಾರಗಳನ್ನು ಫಡ್ನವೀಸ್‌ ಕೈಗೊಂಡಿದ್ದರು, ಅವರನ್ನು ಭೇಟಿಯಾಗುತ್ತೇನೆ, ಅವರೊಂದಿಗೆ ಸ್ವಲ್ಪ ಕೆಲಸವಿದೆ,ʼʼ ಎಂದರು.

ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗುವ ಉದ್ದೇಶ ಕುರಿತು ಪ್ರತಿಕ್ರಿಯಿಸಿದ ಅವರು ಯಾರನ್ನೋ ಭೇಟಿಯಾಗುತ್ತೇನೆ ಎಂಬ ಮಾತ್ರಕ್ಕೆ ನಾನು ಮೃದು ಧೋರಣೆ ತಳೆದಿಲ್ಲ ಎಂದರು.

ಇಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗುವುದಾಗಿ ರಾವತ್‌ ಹೇಳಿದರು.

ಇದನ್ನೂ ಓದಿ:  ಮೊರ್ಬಿಯಲ್ಲಿ ಜೀವ ಉಳಿಸಲು ನದಿಗೆ ಹಾರಿದ್ದ ಮಾಜಿ ಶಾಸಕನನ್ನು ಚುನಾವಣಾ ಕಣಕ್ಕಿಳಿಸಿದ ಬಿಜೆಪಿ

Similar News