×
Ad

ಭಾರತ-ಇಂಗ್ಲೆಂಡ್‌ ಸೆಮಿಫೈನಲ್‌ ವೀಕ್ಷಿಸಲು ಕೋರ್ಟ್‌ ಕೆಲಸಗಳನ್ನು ಸ್ಥಗಿತಗೊಳಿಸಿದ ಪಟಿಯಾಲ ಬಾರ್‌ ಅಸೋಸಿಯೇಶನ್‌

Update: 2022-11-10 17:17 IST

ಪಟಿಯಾಲ: ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ತಂಡಗಳ ನಡುವೆ ಟಿ20 ವಿಶ್ವ ಕಪ್‌ನ ಮಹತ್ವದ ಎರಡನೇ ಸೆಮಿ-ಫೈನಲ್‌ ನಡೆದಿದ್ದು, ಭಾರತ ತಂಡ ಸೋಲನ್ನಪ್ಪಿಯೂ ಆಗಿದೆ.  ಈ ನಡುವೆ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಲೆಂದು ಪಟಿಯಾಲ ವಕೀಲರ ಸಂಘವು ಅಪರಾಹ್ನದ ಎಲ್ಲಾ ಕೋರ್ಟ್‌ ಕೆಲಸಗಳನ್ನು ನಿಲ್ಲಿಸಿತ್ತು ಎಂದು ತಿಳಿದು ಬಂದಿದೆ.

ಟಿ-20 ವಿಶ್ವ ಕಪ್‌ ಪಂದ್ಯದ ಹಿನ್ನೆಲೆಯಲ್ಲಿ ಮಧ್ಯಾಹ್ನ ಊಟದ ವಿರಾಮದ ನಂತರ ಪಟಿಯಾಲದ ಜಿಲ್ಲಾ ನ್ಯಾಯಾಲಯಗಳಲ್ಲಿ  ತನ್ನ ಎಲ್ಲಾ ಕೆಲಸವನ್ನು ನಿಲ್ಲಿಸುವುದಾಗಿ ಪಟಿಯಾಲ ಜಿಲ್ಲಾ ಬಾರ್‌ ಅಸೋಸಿಯೇಶನ್‌ ಹೇಳಿಕೆ ನೀಡಿತ್ತು.

ಪಟಿಯಾಲಾದ ಎಲ್ಲಾ ನ್ಯಾಯಾಲಯಗಳಲ್ಲಿ ಅಪರಾಹ್ನದ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಅಸೋಸಿಯೇಶನ್‌ನ ಉಪಾಧ್ಯಕ್ಷ ಕುಲ್ಜೀತ್‌  ಸಿಂಗ್‌ ಧಲಿವಾಲ್‌ ಮಾಧ್ಯಮವೊಂದಕ್ಕೆ ದೃಢೀಕರಿಸಿದ್ದಾರೆ.

ಭಾರತ-ಇಂಗ್ಲೆಂಡ್‌ ಸೆಮಿಫೈನಲ್‌ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಜತೀಂದರ್‌ ಪಾಲ್‌ ಸಿಂಗ್‌ ಘುಮಾನ್‌ ಅವರ ನೇತೃತ್ವದಲ್ಲಿ  ಇಂದು ಬೆಳಿಗ್ಗೆ ತುರ್ತು ಸಭೆ ಸೇರಿ ಅಪರಾಹ್ನದ ಕೆಲಸಕಾರ್ಯಗಳನ್ನು ನಿಲ್ಲಿಸಲು ನಿರ್ಧರಿಸಿತು.

ಇಂದು ಅಪರಾಹ್ನಕ್ಕೆ ನಿಗದಿಯಾದ ಎಲ್ಲಾ ಕಲಾಪಗಳನ್ನು  ಬೇರೆ ದಿನಗಳಿಗೆ ನಿಗದಿಪಡಿಸುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸಂಘ ಮನವಿಯನ್ನೂ ಮಾಡಿದೆ.

Similar News