ಆಧಾರ್ ನಿಯಮಗಳಿಗೆ ತಿದ್ದುಪಡಿ: 10 ವರ್ಷಗಳಲ್ಲಿ ಕನಿಷ್ಠ ಒಮ್ಮೆಯಾದರೂ ಪೂರಕ ದಾಖಲೆಗಳ ನವೀಕರಣ ಕಡ್ಡಾಯ

Update: 2022-11-10 13:08 GMT

ಹೊಸದಿಲ್ಲಿ: ಸರಕಾರವು ಆಧಾರ್ ನಿಯಮಗಳನ್ನು ತಿದ್ದುಪಡಿಗೊಳಿಸಿದ್ದು, ಆಧಾರ್(Aadhaar) ಹೊಂದಿರುವವರು ನೋಂದಣಿ ದಿನಾಂಕದಿಂದ 10 ವರ್ಷಗಳು ಪೂರ್ಣಗೊಂಡ ಬಳಿಕ ಕನಿಷ್ಠ ಒಂದು ಸಲವಾದರೂ ಪೂರಕ ದಾಖಲೆಗಳನ್ನು ನವೀಕರಿಸುವುದನ್ನು ಅಗತ್ಯವಾಗಿಸಲಾಗಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊರಡಿಸಿರುವ ಗೆಝೆಟ್ ಅಧಿಸೂಚನೆಯಂತೆ ನವೀಕರಣವು ಸೆಂಟ್ರಲ್ ಐಡೆಂಟಿಟಿಸ್ ಡಾಟಾ ರಿಪೋಸಿಟರಿ(Central Identity Data Repository) (ಸಿಐಡಿಆರ್)ಯಲ್ಲಿ ಆಧಾರ್ ಸಂಬಂಧಿತ ಮಾಹಿತಿಯ ‘ನಿರಂತರ ನಿಖರತೆ’('Continuous Accuracy')ಯನ್ನು ಖಚಿತಪಡಿಸಲಿದೆ.

 ಆಧಾರ್ ಸಂಖ್ಯೆಯನ್ನು ಹೊಂದಿರುವವರು ನೋಂದಣಿ ದಿನಾಂಕದಿಂದ ಪ್ರತಿ 10 ಹತ್ತು ವರ್ಷಗಳು ಪೂರ್ಣಗೊಂಡ ಬಳಿಕ ಕನಿಷ್ಠ ಒಂದು ಸಲವಾದರೂ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಸಲ್ಲಿಸುವ ಮೂಲಕ ತಮ್ಮ ಪೂರಕ ದಾಖಲೆಗಳನ್ನು ನವೀಕರಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಧಾರ್ (ನೋಂದಣಿ ಮತ್ತು ನವೀಕರಣ) ನಿಯಮಗಳನ್ನು ಪರಿಷ್ಕರಿಸುವ ಮೂಲಕ ಈ ಬದಲಾವಣೆಯನ್ನು ಮಾಡಲಾಗಿದೆ.

ಆಧಾರ್ ಸಂಖ್ಯೆಯನ್ನು ಪಡೆದು 10 ವರ್ಷಗಳು ಪೂರ್ಣಗೊಂಡಿದ್ದರೂ ತಮ್ಮ ವಿವರಗಳನ್ನು ನವೀಕರಿಸದಿದ್ದವರು ತಮ್ಮ ಗುರುತು ಪುರಾವೆ (ಪಿಒಐ)ಮತ್ತು ವಿಳಾಸದ ಪುರಾವೆ (ಪಿಒಎ)ಗಳನ್ನು ನವೀಕರಿಸುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಕಳೆದ ತಿಂಗಳು ಸಾರ್ವಜನಿಕರನ್ನು ಆಗ್ರಹಿಸಿತ್ತು.

ಇದಕ್ಕಾಗಿ ಯುಐಡಿಎಐ ‘ಅಪ್‌ಡೇಟ್ ಡಾಕ್ಯುಮೆಂಟ್ ’('Update Document')ಎಂಬ ಹೊಸ ವೈಶಿಷ್ಟವನ್ನು ಅಭಿವೃದ್ಧಿಗೊಳಿಸಿದೆ. myAadhaar

ಪೋರ್ಟಲ್ ಮತ್ತು myAadhaar ಆ್ಯಪ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ ಅಥವಾ ಸಾರ್ವಜನಿಕರು ಇದಕ್ಕಾಗಿ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿಯನ್ನು ನೀಡಬಹುದು. ಹೊಸ ವೈಶಿಷ್ಟವು ಆಧಾರ್ ಹೊಂದಿರುವವರು ಪಿಒಐ (ಹೆಸರು ಮತ್ತು ಭಾವಚಿತ್ರವನ್ನೊಳಗೊಂಡ) ಮತ್ತು ಪಿಒಎ (ಹೆಸರು ಮತ್ತು ವಿಳಾಸವನ್ನೊಳಗೊಂಡ)ಗಳನ್ನು ಅಪ್‌ಡೇಟ್ ಮಾಡಲು ಅನುಮತಿಸುತ್ತದೆ.

ದೇಶದಲ್ಲಿ ಈವರೆಗೆ 134 ಕೋ. ಆಧಾರ್ ಸಂಖ್ಯೆಗಳನ್ನು ವಿತರಿಸಲಾಗಿದೆ.

10 ವರ್ಷಗಳ ಹಿಂದೆ ವಿತರಿಸಲಾಗಿದ್ದ ಆಧಾರ್‌ಗಾಗಿ ಈಗ ಆರಂಭಿಸಲಾಗಿರುವ ನವೀಕರಣ ಅಭಿಯಾನವು ಜನಸಂಖ್ಯಾ ಮಾಹಿತಿಯ ಅಪ್‌ಡೇಟ್‌ಗೆ ಸಂಬಂಧಿಸಿದೆ ಮತ್ತು ಬಯೊಮೆಟ್ರಿಕ್ ಅಪ್‌ಡೇಟ್‌ನ್ನು ಒಳಗೊಂಡಿಲ್ಲ. ಅಗತ್ಯವಿದ್ದಾಗ ಬಯೊಮೆಟ್ರಿಕ್ ನವೀಕರಣದ ಬಗ್ಗೆ ನಿರ್ಧರಿಸಲಾಗುವುದು ಎಂದು ಸರಕಾರದ ಮೂಲವೊಂದು ಈ ಮುನ್ನ ತಿಳಿಸಿತ್ತು.

Similar News