152/0 ವರ್ಸಸ್ 170/0: ಇಂಗ್ಲೆಂಡ್ ವಿರುದ್ಧ ಭಾರತ ಸೋತ ಬಳಿಕ ಪಾಕ್ ಪ್ರಧಾನಿ ಟ್ವೀಟ್

Update: 2022-11-11 02:48 GMT

ಹೊಸದಿಲ್ಲಿ: ಅಡಿಲೇಡ್‍ನಲ್ಲಿ (Adelaide) ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್‍ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಟಿ-20 ವಿಶ್ವಕಪ್ (T20 World Cup) ಗೆಲ್ಲುವ ಭಾರತ ತಂಡದ ಕನಸು ನುಚ್ಚು ನೂರಾಗಿದೆ. 169 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡಿನ ಅರಂಭಿಕ ಆಟಗಾರರಾದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರು ಇನ್ನೂ ನಾಲ್ಕು ಓವರ್‍ಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿದರು.

ರವಿವಾರ ನಡೆಯುವ ಫೈನಲ್‍ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತದ ತಂಡದ ಈ ಹೀನಾಯ ಸೋಲಿನ ಬಳಿ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಶರೀಫ್ (Pakistan Prime Minister Shehbaz Sharif ) ಭಾರತ ತಂಡದ ಕಾಲೆಳೆದಿದ್ದಾರೆ.

"ಇದೀಗ, ರವಿವಾರ 152/0 ವರ್ಸಸ್ 170/0" ಎಂದು ಶೆಹಬಾಝ್ ಶರೀಫ್ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷದ ವಿಶ್ವಕಪ್‍ನಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಜಯ ಸಾಧಿಸಿದ್ದನ್ನು ಪಾಕ್ ಪ್ರಧಾನಿ ಉಲ್ಲೇಖಿಸಿದ್ದಾರೆ.

2021ರ ವಿಶ್ವಕಪ್‍ನಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಅಝಂ ಮತ್ತು ಮುಹಮ್ಮದ್ ರಿಝ್ವಾನ್ ಅವರು 152 ರನ್‍ಗಳ ಜತೆಯಾಟದ ಮೂಲಕ ಭಾರತದ ವಿರುದ್ಧ 10 ವಿಕೆಟ್‍ಗಳ ಗೆಲುವಿಗೆ ಕಾರಣರಾಗಿದ್ದರು.

ಟಿ-20 ಕ್ರಿಕೆಟ್‍ನಲ್ಲಿ ಬಲಾಢ್ಯ ಆರಂಭಿಕ ಆಟಗಾರರು ಅಗತ್ಯ ಎಂದು ಭಾರತದ ಸೋಲಿನ ಬಗ್ಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದರು. ಬ್ಯಾಟಿಂಗ್ ಇರಲಿ, ಬೌಲಿಂಗ್‍ನಲ್ಲಾಗಲೀ ಮೊದಲ ಆರು ಓವರ್ ಕಳೆದುಕೊಂಡರೆ, ಮುಂದಿನದು ಬಹಳ ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದರು.

2007ರಲ್ಲಿ ಚೊಚ್ಚಲ ಟಿ-20 ಕಪ್ ಗೆದ್ದ ಭಾರತ ತಂಡ 2014ರ ಬಳಿಕ ಫೈನಲ್ ತಲುಪಿಲ್ಲ. ಆದರೆ ಈ ಬಾರಿ ಸೆಮಿಫೈನಲ್‍ಗೆ ಅರ್ಹತೆ ಪಡೆದದ್ದು, ಭಾರತೀಯ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿತ್ತು.

ಇದನ್ನೂ ಓದಿ: ಭಾರತ ಟಿ-20 ತಂಡದಿಂದ ಹಿರಿಯರಿಗೆ ಕೊಕ್; ಆಮೂಲಾಗ್ರ ಬದಲಾವಣೆ?

Similar News