ಸಿಜೆಐ ಚಂದ್ರಚೂಡ್ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾ: ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Update: 2022-11-11 10:28 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ (CJI) ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಜಸ್ಟಿಸ್  ಡಿ ವೈ ಚಂದ್ರಚೂಡ್ (DY Chandrachud) ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಇಂದು ವಜಾಗೊಳಿಸಿದ ದಿಲ್ಲಿ ಹೈಕೋರ್ಟ್, ಅರ್ಜಿದಾರನಿಗೆ ರೂ. 1 ಲಕ್ಷ ದಂಡ ವಿಧಿಸಿದೆ.

ಈ ಪಿಐಎಲ್ ಅನ್ನು 'ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಶನ್' ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರ ಪೀಠ ಹೇಳಿದೆ.

ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿ ಡಿ ವೈ ಚಂದ್ರಚೂಡ್ ಅವರನ್ನು ಸಿಜೆಐ ಆಗಿ ನೇಮಕ ಮಾಡಲಾಗಿದೆ ಎಂದು ಅರ್ಜಿದಾರ ಸಂಜೀವ್ ಕುಮಾರ್ ತಿವಾರಿ ಆರೋಪಿಸಿದ್ದರಲ್ಲದೆ ಚಂದ್ರಚೂಡ್ ಅವರ ನೇಮಕಾತಿಗೆ ತಕ್ಷಣ ತಡೆ ಹೇರಬೇಕೆಂದೂ ಕೋರಿದ್ದಾರೆ.

ಹೊಸ ಸಿಜೆಐ ಅವರು "ದೇಶ-ವಿರೋಧಿಗಳು ಮತ್ತು ನಕ್ಸಲೈಟ್ ಕ್ರೈಸ್ತ ಉಗ್ರರೊಂದಿಗೆ ಯಾವುದೇ ರೀತಿಯ ನಂಟು ಹೊಂದಿಲ್ಲ'' ಎಂಬುದನ್ನು ದೃಢೀಕರಿಸಲು ಭದ್ರತಾ ಏಜನ್ಸಿಗಳು ತನಿಖೆ ನಡೆಸಬೇಕು ಎಂದು ಭಾರತದ "ಉತ್ತಮವಾಗಿ ತರಬೇತಿ ಪಡೆದ ಬುದ್ಧಿವಂತ ಸಾಮಾನ್ಯ ನಾಗರಿಕ'' ಎಂದು ತನ್ನನ್ನು ವರ್ಣಿಸಿರುವ ಅರ್ಜಿದಾರ ತನ್ನ ಅರ್ಜಿಯಲ್ಲಿ ಹೇಳಿದ್ದರು.

ಮುಖ್ಯ  ನ್ಯಾಯಮೂರ್ತಿಗಳು ತಮ್ಮ ಸಹವರ್ತಿಯಾಗಬೇಕೆಂದು ವಕೀಲರುಗಳಾದ ಪ್ರಶಾಂತ್ ಭೂಷಣ್, ಇಂದಿರಾ ಜೈಸಿಂಗ್ ಮುಂತಾದವರು ಬಯಸಿದ್ದಾರೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

Similar News