ಹಿಮಾಚಲ ಪ್ರದೇಶದ ವಿಧಾನಸಭೆಗೆ ಮತದಾನ ಆರಂಭ

Update: 2022-11-12 04:36 GMT

ಶಿಮ್ಲಾ: ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಇಂದು  ಚುನಾವಣೆ ನಡೆಯುತ್ತಿದ್ದು, 55 ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ.

ಹಿಮಾಲಯ ರಾಜ್ಯದಲ್ಲಿ ಸರಕಾರವನ್ನು ಬದಲಾಯಿಸುವ ಸಂಪ್ರದಾಯ ಮುಂದುವರಿಯಲಿದೆಯೇ   ಎನ್ನುವುದು ಡಿಸೆಂಬರ್ 8 ರಂದು ನಡೆಯುವ ಮತ ಎಣಿಕೆಯ ವೇಳೆ ಗೊತ್ತಾಗಲಿದೆ. ಬಿಜೆಪಿ ಸತತ 2ನೇ ಅವಧಿಗೆ ಅಧಿಕಾರಕ್ಕೇರಿ ಇತಿಹಾಸ ನಿರ್ಮಿಸಲು ಕಾಯುತ್ತಿದೆ. ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿ ತಟ್ಟಿದೆ.

ಬಿಜೆಪಿ 21 ಬಂಡಾಯಗಾರರನ್ನು ಎದುರಿಸುತ್ತಿದ್ದು, ಪಕ್ಷದ ರಾಷ್ಟ್ರೀಯ ಮುಖ್ಯಸ್ಥ ಜೆ.ಪಿ. ನಡ್ಡಾ ಅವರಿಗೂ ಈ ಸ್ಪರ್ಧೆಯು ಪ್ರತಿಷ್ಠೆಯ ವಿಷಯವಾಗಿದೆ.

ಚುನಾವಣೆಯು ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ್ದು, ಮತದಾರರು ನಾಲ್ಕು ದಶಕಗಳ ಸಂಪ್ರದಾಯದಂತೆ ಅಧಿಕಾರದಲ್ಲಿರುವವರ ವಿರುದ್ಧ ಮತ ಹಾಕಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಮಾಜಿ ಮುಖ್ಯಮಂತ್ರಿ   ವೀರಭದ್ರ ಸಿಂಗ್ ಅವರ ನಿಧನದ ನಂತರ ನಾಯಕತ್ವದ ಬಿಕ್ಕಟ್ಟಿನೊಂದಿಗೆ ಸುತ್ತುವರೆದಿರುವ ಕಾಂಗ್ರೆಸ್ ಪಕ್ಷವು ತನ್ನ ಸೀಟುವಾರು ಟಿಕೆಟ್ ಹಂಚಿಕೆ "ಹಿಂದಿಗಿಂತ ಉತ್ತಮವಾಗಿ" ಇರುವುದರಿಂದ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.

ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದು,  ಮಗ ವಿಕ್ರಮಾದಿತ್ಯ ಸಿಂಗ್ ಸ್ಪರ್ಧಾಕಣದಲ್ಲಿದ್ದಾರೆ.

ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನಕ್ಕಾಗಿ ಚುನಾವಣಾ ಆಯೋಗವು ದೂರದ ಪ್ರದೇಶಗಳಲ್ಲಿ ಮೂರು ಸೇರಿದಂತೆ 7,884 ಮತಗಟ್ಟೆಗಳನ್ನು ಸ್ಥಾಪಿಸಿದೆ. 52 ಮತದಾರರಿಗೆ 15,256 ಅಡಿ ಎತ್ತರದಲ್ಲಿರುವ ಲಾಹೌಲ್-ಸ್ಪಿಟಿ ಜಿಲ್ಲೆಯ ಕಾಜಾದಲ್ಲಿರುವ ತಾಶಿಗಂಗ್‌ನಲ್ಲಿ ಅತಿ ಎತ್ತರದ ಮತಗಟ್ಟೆ ಸ್ಥಾಪಿಸಲಾಗಿದೆ.

Similar News