ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದರೆ ಜೈರಾಮ್ ಠಾಕೂರ್ ಮತ್ತೆ ಸಿಎಂ: ಜೆ. ಪಿ ನಡ್ಡಾ

Update: 2022-11-12 18:18 GMT

ಬಿಲಾಸ್ಪುರ, ನ. 12  : ಹಿಮಾಚಲಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ ಪ್ರಸಕ್ತ ಮುಖ್ಯಮಂತ್ರಿ ಜೈರಾಮ್ ಠಾಕೂರ್(Jairam Thakur) ಅವರೇ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (Jagat Prakash Nadda) ಅವರು ಶನಿವಾರ ಹೇಳಿದ್ದಾರೆ.

 
‘‘ನಾವು ಖಂಡಿತವಾಗಿ ಪೂರ್ಣ ಬಹುಮತ ಪಡೆಯಲಿದ್ದೇವೆ. ಜೈರಾಮ್ ಠಾಕೂರ್ (Jairam Thakur) ನಾಯಕತ್ವದಲ್ಲಿ ಚುನಾವಣೆ ಸ್ಪರ್ಧಿಸಲಿದ್ದೇವೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಹಿಮಾಚಲಪ್ರದೇಶದ ವಿಧಾನ ಸಭೆ ಚುನಾವಣೆಯ ಯಾವುದೇ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳದೇ ಇರುವುದಕ್ಕೆ ತರಾಟೆಗೆ ತೆಗೆದುಕೊಂಡ ನಡ್ಡಾ, ರಾಹುಲ್ ಗಾಂಧಿ ವೃತ್ತಿಪರ ನಾಯಕ ಎಂದರು. ‘‘ಅವರು ವೃತ್ತಿಪರ ನಾಯಕರು.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ತಾವು ಏನನ್ನೂ ಗಳಿಸುವುದಿಲ್ಲ ಎಂದು ಅವರು ಅರಿತುಕೊಂಡಿದ್ದಾರೆ. ಒಂದು ಬಾರಿ ಜಯ ಗಳಿಸಬಹುದು ಅಥವಾ ಜಯ ಗಳಿಸಲು ಸಾಧ್ಯ ಎಂದು ಭಾವಿಸಿದ್ದರೆ, ಅವರು ಲಾಭಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಏನನ್ನೂ ಗಳಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಆದುದರಿಂದ ಅವರು ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ’’ ಎಂದು ನಡ್ಡಾ ಹೇಳಿದರು.

Similar News