×
Ad

ಅಂದು ಹಸಿದ ಹೊಟ್ಟೆಯಲ್ಲೇ ಮಲಗುತ್ತಿದ್ದ ಮಹಾರಾಷ್ಟ್ರದ ಆದಿವಾಸಿ ಬಾಲಕ ಇಂದು ಅಮೆರಿಕದಲ್ಲಿ ವಿಜ್ಞಾನಿ

Update: 2022-11-13 18:02 IST

ನಾಗ್ಪುರ,ನ.13: ಅಂದು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದ ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಕುಗ್ರಾಮವೊಂದರ ಆದಿವಾಸಿ ಬಾಲಕನಾಗಿದ್ದು ಇಂದು ಅಮೆರಿಕದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಭಾಸ್ಕರ ಹಲಾಮಿಯವರ ಜೀವನ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಕುರ್ಖೇಡಾ ತಾಲೂಕಿನ ಚಿರ್ಚಡಿ ಗ್ರಾಮದಲ್ಲಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಲಾಮಿ (44) ಅಮೆರಿಕದ ಮೇರಿಲ್ಯಾಂಡ್ನಲ್ಲಿಯ ಬಯೊಫಾರ್ಮಾಸ್ಯೂಟಿಕಲ್ ಕಂಪನಿ ಸಿನಾಮಿಕ್ಸ್ ಇಂಕ್ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಈ ಕಂಪನಿಯು ಜೆನೆಟಿಕ್ ಔಷಧಿಗಳಲ್ಲಿ ಸಂಶೋಧನೆಯನ್ನು ನಡೆಸುತ್ತದೆ ಮತ್ತು ಆರ್ಎನ್ಎ ತಯಾರಿಕೆ ಹಾಗೂ ಸಂಶ್ಲೇಷಣೆಯನ್ನು ಹಲಾಮಿ ನೋಡಿಕೊಳ್ಳುತ್ತಿದ್ದಾರೆ.ಯಶಸ್ವಿ ವಿಜ್ಞಾನಿಯಾಗುವಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದ್ದ ಹಲಾಮಿ ತನ್ನ ಹೆಸರಿನಲ್ಲಿ ಹಲವು ಪ್ರಥಮಗಳನ್ನು ಹೊಂದಿದ್ದಾರೆ.

ಚಿರ್ಚಡಿಯ ಮೊದಲ ವಿಜ್ಞಾನ ಪದವೀಧರರಾಗಿರುವ ಹಲಾಮಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪಡೆದಿರುವ ಗ್ರಾಮದ ಮೊದಲಿಗರೂ ಆಗಿದ್ದಾರೆ.ಸುದ್ದಿಸಂಸ್ಥೆಯೊಡನೆ ಮಾತನಾಡಿದ ಹಲಾಮಿ ತನ್ನ ಕುಟುಂಬವು ಅಲ್ಪಾದಾಯದಲ್ಲಿ ದಿನಗಳನ್ನು ದೂಡುತ್ತಿದ್ದಾಗಿನ ತನ್ನ ಬಾಲ್ಯದ ಆರಂಭಿಕ ವರ್ಷಗಳನ್ನು ನೆನಪಿಸಿಕೊಂಡರು.

‘ಒಂದು ಹೊತ್ತಿನ ಊಟಕ್ಕೂ ನಾವು ತುಂಬ ಕಷ್ಟಪಡಬೇಕಿತ್ತು. ಆಹಾರ ಅಥವಾ ಕೆಲಸವೇ ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಕುಟುಂಬವು ಹೇಗೆ ಬದುಕುಳಿದಿತ್ತು ಎಂಬ ಬಗ್ಗೆ ಇತ್ತೀಚಿನವರೆಗೂ ನನ್ನ ಹೆತ್ತವರು ಅಚ್ಚರಿ ಪಡುತ್ತಿದ್ದರು’ ಎಂದು ಹಲಾಮಿ ಹೇಳಿದರು.

‘ವರ್ಷದ ಕೆಲವು ತಿಂಗಳುಗಳು,ಅದರಲ್ಲೂ ಮಳೆಗಾಲದಲ್ಲಿ,ತುಂಬ ಕಷ್ಟದ್ದಾಗಿರುತ್ತಿದ್ದವು. ನಮ್ಮ ಪುಟ್ಟ ಹೊಲದಲ್ಲಿ ಬೆಳೆಯೂ ಇರುತ್ತಿರಲಿಲ್ಲ,ಕೆಲಸವೂ ಇರುತ್ತಿರಲಿಲ್ಲ. ನಾವು ಮಹುವಾ ಹೂವುಗಳನ್ನು ಬೇಯಿಸುತ್ತಿದ್ದೆವು. ಅವುಗಳನ್ನು ತಿನ್ನುವುದು ಮತ್ತು ಜೀರ್ಣಿಸಿಕೊಳ್ಳುವುದು ಸಲಭವಾಗಿರಲಿಲ್ಲ. ನಾವು ಪರ್ಸೋದ್ (ಕಾಡು ಅಕ್ಕಿ)ಯನ್ನು ಸಂಗ್ರಹಿಸುತ್ತಿದ್ದೆವು ಮತ್ತು ಅಕ್ಕಿಯ ಹಿಟ್ಟನ್ನು ನೀರಿನಲ್ಲಿ ಬೇಯಿಸಿ ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಇದು ನಮ್ಮೆಬ್ಬರ ಕಥೆಯಲ್ಲ,ಗ್ರಾಮದ ಶೇ.90ರಷ್ಟು ಜನರು ಬದುಕುಳಿಯಲು ಇದನ್ನೇ ಮಾಡುತ್ತಿದ್ದರು’ ಎಂದರು.

ಚಿರ್ಚಡಿಯಲ್ಲಿ 400ರಿಂದ 500 ಕುಟುಂಬಗಳು ವಾಸವಾಗಿದ್ದವು. ತಮ್ಮ ಸಣ್ಣ ಹೊಲದ ಉತ್ಪನ್ನ ಮನೆಯವರ ತುತ್ತಿನ ಚೀಲಗಳನ್ನು ತುಂಬಿಸಲು ಸಾಲುತ್ತಿರಲಿಲ್ಲ,ಹೀಗಾಗಿ ಹಲಾಮಿಯವರ ಹೆತ್ತವರು ಗ್ರಾಮದಲ್ಲಿ ಮನೆಗೆಲಸದ ಆಳುಗಳಾಗಿ ದುಡಿಯುತ್ತಿದ್ದರು.

ಏಳನೇ ತರಗತಿಯವರೆಗೆ ಓದಿದ್ದ ಹಲಾಮಿಯವರ ತಂದೆಗೆ 100 ಕಿ.ಮೀ.ದೂರದ ಕಸನಸೂರ ತಾಲೂಕಿನ ಶಾಲೆಯೊಂದರಲ್ಲಿ ಅಡಿಗೆ ಮಾಡುವ ಕೆಲಸ ದೊರಕಿದ ಬಳಿಕ ಕುಟುಂಬದ ಸ್ಥಿತಿ ಸ್ವಲ್ಪ ಸುಧಾರಿಸಿತ್ತು.ನಾಲ್ಕೈದು ತಿಂಗಳುಗಳ ಬಳಿಕ ಹಲಾಮಿಯವರ ಕುಟುಂಬ ಅಲ್ಲಿಗೇ ಸ್ಥಳಾಂತರಗೊಂಡಿತ್ತು.

ಕಸನಸೂರಿನ ಆಶ್ರಮ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಶಿಕ್ಷಣದ ಬಳಿಕ ಹಲಾಮಿಯವರಿಗೆ ವಿದ್ಯಾರ್ಥಿವೇತನ ಲಭಿಸಿತ್ತು ಮತ್ತು 10ನೇ ತರಗತಿಯವರೆಗಿನ ಶಿಕ್ಷಣವನ್ನು ಯವತ್ಮಾಲ್ನ ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಗಡಚಿರೋಲಿ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದ ಬಳಿಕ ನಾಗ್ಪುರದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು.

2003ರಲ್ಲಿ ನಾಗ್ಪುರದ ಪ್ರತಿಷ್ಠಿತ ಲಕ್ಷ್ಮೀನಾರಾಯಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ನೇಮಕೊಂಡ ಹಲಾಮಿ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕ ಸಂಶೋಧನೆಯತ್ತ ಗಮನವನ್ನು ಕೇಂದ್ರೀಕರಿಸಿದ್ದರು. ಪಿಎಚ್ಡಿ ಮಾಡಲು ಅಮೆರಿಕಕ್ಕೆ ತೆರಳಿದ್ದ ಅವರು ಮಿಚಿಗನ್ ಟೆಕ್ನಾಲಾಜಿಕಲ್ ವಿವಿಯಲ್ಲಿ ತನ್ನ ಸಂಶೋಧನೆಗಾಗಿ ಡಿಎನ್ಎ ಮತ್ತು ಆರ್ಎನ್ಎ ಆಯ್ಕೆ ಮಾಡಿಕೊಂಡಿದ್ದರು.

ಡಿಎನ್ಎ/ಆರ್ಎನ್ಎ ಕೇತ್ರದಲ್ಲಿ ಪ್ರತಿಭೆಗಳಿಗಾಗಿ ಹುಡುಕಾಡುತ್ತಿರುವ ನೇಮಕಾತಿ ಕಂಪನಿಗಳಿಂದ ಹಲಾಮಿಯವರಿಗೆ ಈಗಲೂ ವಾರಕ್ಕೆ ಕನಿಷ್ಠ ಎರಡು ಇಮೇಲ್ಗಳು ಬರುತ್ತಿವೆ.ತನ್ನ ಯಶಸ್ಸಿನ ಹೆಗ್ಗಳಿಕೆಯನ್ನು ತನ್ನ ಹೆತ್ತವರಿಗೆ ಸಲ್ಲಿಸಿರುವ ಹಲಾಮಿ,ಚಿರ್ಚಡಿಯಲ್ಲಿ ಅವರಿಗಾಗಿ ಮನೆಯನ್ನು ನಿರ್ಮಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ತಂದೆಯನ್ನು ಕಳೆದುಕೊಂಡಿದ್ದಾರೆ.ಭಾರತಕ್ಕೆ ತನ್ನ ಪ್ರವಾಸದ ಸಂದರ್ಭದಲ್ಲಿ ಹಲಾಮಿ ಶಾಲೆಗಳು,ಆಶ್ರಮ ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ತನ್ನ ಮನೆಯಲ್ಲಿಯೂ ವಿದ್ಯಾರ್ಥಿಗಳನ್ನು ಭೇಟಿಯಾಗಿ ವೃತ್ತಿ ಜೀವನದ ಕುರಿತು ಮತ್ತು ಗುರಿ ಸಾಧನೆಯ ಮಾರ್ಗಗಳ ಬಗ್ಗೆ ಸಲಹೆ ನೀಡುತ್ತಾರೆ.

Similar News