2020ರ ಗಲಭೆ ಪ್ರಕರಣದಲ್ಲಿ ʼಅಸಂಬದ್ಧʼ ಸಾಕ್ಷಿಗಳನ್ನು ಹಾಜರುಪಡಿಸಿದ್ದಕ್ಕೆ ದಿಲ್ಲಿ ಪೊಲೀಸರಿಗೆ ಕೋರ್ಟ್‌ ತರಾಟೆ

Update: 2022-11-15 12:26 GMT

ಹೊಸದಿಲ್ಲಿ,ನ.15: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ಸಂಭವಿಸಿದ್ದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ‘ಅಸಂಬದ್ಧ ಸಾಕ್ಷಿ’ಗಳನ್ನು ಹಾಜರು ಪಡಿಸಿದ್ದಕ್ಕಾಗಿ ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ದಿಲ್ಲಿಯ ನ್ಯಾಯಾಲಯವು,ಇದೇ ವೇಳೆ ‘ಎಚ್ಚೆತ್ತುಕೊಳ್ಳುವಂತೆ ’ ಪ್ರಾಸಿಕ್ಯೂಷನ್ಗೆ ಅಂತಿಮ ಎಚ್ಚರಿಕೆಯನ್ನು ನೀಡಿದೆ.

ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಎಲ್ಲವೂ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಹಿಂದಿನ ಹಲವಾರು ಪ್ರಕರಣಗಳಲ್ಲಿ ಪದೇ ಪದೇ ನಿರ್ದೇಶನಗಳನ್ನು ನೀಡಿದ್ದರೂ ಈ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಆಗಲೀ ತನಿಖಾಧಿಕಾರಿಯಾಗಲೀ ಆ ಕಷ್ಟವನ್ನು ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯವು ಝಾಡಿಸಿತು.

ನ್ಯಾಯಾಲಯವು ಮೂವರು ಮುಸ್ಲಿಮ್ ವ್ಯಕ್ತಿಗಳ ವಿರುದ್ಧ ಖಜುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದ ಕಲಾಪವನ್ನು ಕೈಗೆತ್ತಿಕೊಂಡಿತ್ತು.

ಸೋಮವಾರ ಮನೋಜ್ ಕುಮಾರ್ ಎಂಬ ಸಾಕ್ಷಿ ನ್ಯಾಯಾಲಯದಲ್ಲಿ ಹಾಜರಿದ್ದ. ಇದನ್ನು ಗಮನಿಸಿದ ಆರೋಪಿಗಳ ಪೈಕಿ ಓರ್ವನ ಪರ ವಕೀಲರು,‌ ರೂಪಿಸಲಾಗಿರುವ ಆರೋಪಗಳಲ್ಲಿ ಕುಮಾರ್‌ನ ದೂರನ್ನು ಉಲ್ಲೇಖಿಸಿಲ್ಲ ಎನ್ನುವುದನ್ನು ಬೆಟ್ಟು ಮಾಡಿದರು. ಘಟನೆಯ ತಪ್ಪು ದಿನಾಂಕವನ್ನು ಆರೋಪಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಕುಮಾರ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಆರೋಪಗಳನ್ನು ರೂಪಿಸಲಾಗಿಲ್ಲ,ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಲಿರುವ ಇನ್ನೋರ್ವ ಸಾಕ್ಷಿಗೂ ಇದು ಅನ್ವಯಿಸುತ್ತದೆ ಎಂದು ಪ್ರಾಸಿಕ್ಯೂಷನ್ ಒಪ್ಪಿಕೊಂಡಿತು.
ಹಲವಾರು ದೂರುಗಳನ್ನು ಒಂದುಗೂಡಿಸಲಾಗಿದೆ ಎಂದೂ ಅದು ತಿಳಿಸಿತು.

ಇನ್ನು ಮುಂದೆ ಇಂತಹ ತಪ್ಪುಗಳ ಕುರಿತು ನ್ಯಾಯಾಲಯವು ಉದಾರವಾಗಿರುವುದಿಲ್ಲ ಮತ್ತು ಎಚ್ಚೆತ್ತುಕೊಳ್ಳುವಂತೆ ಇದು ಪ್ರಾಸಿಕ್ಯೂಷನ್ಗೆ ಕೊನೆಯ ಎಚ್ಚರಿಕೆಯಾಗಿದೆ ಎಂದು ಹೇಳಿದ ನ್ಯಾಯಾಲಯವು,ಪ್ರಕರಣದ ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು.

Similar News