ಆರ್ಥಿಕ ಹಿಂಜರಿತ ಭೀತಿ: ಅಮೆರಿಕದಲ್ಲಿ ಸಾವಿರಾರು ಉದ್ಯೋಗ ಕಡಿತ

Update: 2022-11-17 02:07 GMT

ವಾಷಿಂಗ್ಟನ್: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ನಡುವೆಯೇ ಕಾರ್ಪೊರೇಟ್ ಕಂಪೆನಿಗಳು ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದೆ. ಹಣದುಬ್ಬರದ ವಿರುದ್ಧ ಅಮೆರಿಕದ ಫೆಡರಲ್ ರಿಸರ್ವ್ (U.S. Federal Reserve) ನಡೆಸುತ್ತಿರುವ ಹೋರಾಟಕ್ಕೆ ಪೂರಕವಾಗಿ ಈ ಪುನರ್ರಚನೆ ಪ್ರಕ್ರಿಯೆಯ ಅಂಗವಾಗಿ ಭಾರಿ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಿವೆ ಎಂದು timesofindia.com ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ಅಮೆರಿಕ ಉದ್ಯೋಗದಾತರು ದೇಶಾದ್ಯಂತ ಸುಮಾರು 33,843 ಉದ್ಯೋಗ ಕಡಿತಗೊಳಿಸಿದ್ದು, ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡ 13ರಷ್ಟು ಅಧಿಕ. 2021ರ ಫೆಬ್ರುವರಿ ಬಳಿಕ ಗರಿಷ್ಠ ಮಟ್ಟದ ಉದ್ಯೋಗ ಕಡಿತಗೊಂಡಿದೆ ಎಂದು ವರದಿ ಹೇಳಿದೆ.

ಇ-ಕಾಮರ್ಸ್ ದೈತ್ಯ ಕಂಪನಿಯಾದ ಅಮೆಝಾನ್ (Amazon.com) ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ್ದರೂ, ಅಂಕಿ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಮೆಟಾ ಪ್ಲಾಟ್‍ಫಾರಂ (Meta Platforms) ಶೇಕಡ 13ರಷ್ಟು ಉದ್ಯೋಗಿಗಳನ್ನು ಅಂದರೆ 11 ಸಾವಿರ ಮಂದಿಯನ್ನು ಮನೆಗೆ ಕಳುಹಿಸಿದೆ. ಜಾಹೀರಾತು ಮಾರುಕಟ್ಟೆ ದುರ್ಬಲಗೊಂಡಿರುವ ಮತ್ತು ವೆಚ್ಚ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ವಾಲ್‍ಸ್ಟ್ರೀಟ್‍ನ ಅತಿದೊಡ್ಡ ಬ್ಯಾಂಕ್ ಎನಿಸಿದ ಸಿಟಿಗ್ರೂಪ್ ಇನ್‍ಕಾರ್ಪೊರೇಷನ್ (Citigroup Inc), ಹೂಡಿಕೆ ಬ್ಯಾಂಕಿಂಗ್ ವಿಭಾಗದಲ್ಲಿ ದೊಡ್ಡ ಪ್ರಮಾಣದ ಕಡಿತಕ್ಕೆ ಚಾಲನೆ ನೀಡಿದೆ ಎಂದು ಬ್ಲೂಮ್‍ಬರ್ಗ್ ನ್ಯೂಸ್ ವರದಿ ಮಾಡಿದೆ.

ಅಂತೆಯೇ ಮಾರ್ಗನ್ ಸ್ಟ್ಯಾನ್ಲೆ (Morgan Stanley), ಇಂಟೆಲ್ ಕಾರ್ಪೊರೇಷನ್ (Intel Corp), ಮೈಕ್ರೋಸಾಫ್ಟ್ (Microsoft Corp), ಜಾನ್ಸನ್ & ಜಾನ್ಸನ್ (Johnson & Johnson), ಟ್ವಿಟ್ಟರ್, ಲಿಫ್ಟ್, ವಾರ್ನರ್ ಬ್ರೋಸ್ ಡಿಸ್ಕವರಿ, ಬಿಯಾಂಡ್ ಮೀಟ್ ಇನ್‍ಕಾರ್ಪೊರೇಷನ್, ಸ್ಟ್ರಿಪ್ ಇನ್‍ಕಾರ್ಪೊರೇಷನ್, ಚಿಮ್, ಓಪನ್ ಡೋರ್ ಟೆಕ್ನಾಲಜೀಸ್, ಫಿಲಿಪ್ಸ್ 66, ಚೆಸಪೀಕ್ ಎನರ್ಜಿ ಕಾರ್ಪೊರೇಷನ್, ಸಿಯಾಗೇಟ್ ಟೆಕ್ನಾಲಜಿ ಹೋಲ್ಡಿಂಗ್ಸ್, ಅರೈವಲ್ ಎಸ್‍ಎ, ಕಾಯಿನ್‍ಬೇಸ್ ಗ್ಲೋಬಲ್, ವಾಲ್ಟ್ ಡಿಸ್ನಿ ಮತ್ತಿತರ ಕಂಪನಿಗಳಲ್ಲಿ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗಿದೆ ಎಂದು timesofindia.com ವರದಿ ಮಾಡಿದೆ.

Similar News