ಬಿಹಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಅರಿವಳಿಕೆ ನೀಡದೇ ಶಸ್ತ್ರಚಿಕಿತ್ಸೆ!

ತನಿಖೆಗೆ ಜಿಲ್ಲಾಧಿಕಾರಿ ರಂಜನ್ ಘೋಷ್ ಆದೇಶ

Update: 2022-11-17 02:29 GMT

ಪಾಟ್ನಾ: ಬಿಹಾರದ ಖಗಾರಿಯಾ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಅರಿವಳಿಕೆ (anaesthesia) ನೀಡದೇ ಸುಮಾರು 24 ಮಂದಿ ಗ್ರಾಮೀಣ ಮಹಿಳೆಯರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (tubectomy) ನಡೆಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ ಎಂದು timesofindia.com ವರದಿ ಮಾಡಿದೆ.

ಪರಿಣಾಮವಾಗಿ ಎಚ್ಚರವಾಗಿದ್ದ ಮಹಿಳೆಯರು ಶಸ್ತ್ರಚಿಕಿತ್ಸೆ ವೇಳೆ ನೋವಿನಿಂದ ಚೀರಾಡುತ್ತಿದ್ದರು ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆ ಮಾಡುವ ಜಾಗಕ್ಕೆ ಅನಸ್ತೇಸಿಯಾ ನೀಡಿ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ನೆರವೇರಿಸುವುದು ನಿಗದಿತ ಕ್ರಮ.

ವೈದ್ಯರ ಈ ಕ್ರಮದಿಂದ ತಮಗೆ ಆದ ಯಾತನೆ ಬಗ್ಗೆ ಮಹಿಳೆಯರು ವಿವರಿಸಿದ ಬೆನ್ನಲ್ಲೇ ಖಗಾರಿಯಾ ಜಿಲ್ಲಾಧಿಕಾರಿ ರಂಜನ್ ಘೋಷ್ ಬುಧವಾರ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

"ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾಗ ನಾನು ನೋವಿನಿಂದ ಚೀರುತ್ತಿದ್ದೆ; ನಾಲ್ಕು ಮಂದಿ ನನ್ನ ಕೈ ಕಾಲುಗಳನ್ನು ಬಲವಾಗಿ ಹಿಡಿದುಕೊಂಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಏನೋ ನೀಡಿದ ಬಳಿಕವಷ್ಟೇ ನನಗೆ ಮಂಪರು ಬಂತು" ಎಂದು ಅಲೌಲಿ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಕುಮಾರಿ ಪ್ರತಿಮಾ ವಿವರಿಸಿದರು.

ಶಸ್ತ್ರಚಿಕಿತ್ಸೆ ಪ್ರಕ್ರಿಯೆಯುದ್ದಕ್ಕೂ ತಾನು ಎಚ್ಚರ ಇದ್ದುದಾಗಿ ಮತ್ತೊಬ್ಬ ಮಹಿಳೆ ಹೇಳಿದ್ದಾರೆ. "ಬ್ಲೇಡು ನನ್ನ ದೇಹಕ್ಕೆ ತಗುಲಿದಾಗ ನನಗೆ ತೀವ್ರ ನೋವಿನ ಅನುಭವ ಆಯಿತು" ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ 53 ಮಂದಿಯ ಪೈಕಿ 24 ಮಂದಿ ಮಹಿಳೆಯರು. ಸ್ವಯಂಸೇವಾ ಸಂಸ್ಥೆಯೊಂದರ ಅಭಿಯಾನದ ಅಂಗವಾಗಿ ಸರ್ಕಾರಿ ಪ್ರಾಯೋಜಿತ ಶಸ್ತ್ರಚಿಕಿತ್ಸಾ ಶಿಬಿರ ಇದಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿವಿಲ್ ಶಸ್ತ್ರಚಿಕಿತ್ಸಕರಿಗೆ ಆದೇಶ ನೀಡಿರುವುದಾಗಿ ರಂಜನ್ ಘೋಷ್ ಹೇಳಿದ್ದಾರೆ.

ಎರಡೂ ಆರೋಗ್ಯ ಕೇಂದ್ರಗಳಿಂದ ಸಿವಿಲ್ ಸರ್ಜನ್ ಡಾ.ಅಮರನಾಥ್ ಝಾ ಸ್ಪಷ್ಟನೆ ಕೇಳಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ವಿವರಿಸಿದ್ದಾರೆ. ಅನಸ್ತೇಸಿಯಾ ಬಳಸಲಾಗಿದೆ, ಕೆಲ ಮಹಿಳೆಯರಲ್ಲಿ ಇದು ಕೆಲಸ ಮಾಡದಿರುವ ಸಾಧ್ಯತೆ ಇದೆ ಎಂದು ಪರ್ಬತ್ತಾ ಆರೋಗ್ಯ ಕೇಂದ್ರದ ಡಾ.ರಾಜೀವ್ ರಂಜನ್ ಸಮುಜಾಯಿಷಿ ನೀಡಿದ್ದಾರೆ ಎಂದು timesofindia.com ವರದಿ ಮಾಡಿದೆ.

Similar News