ಗುಜರಾತ್ ವಿಧಾನಸಭಾ ಚುನಾವಣೆ: ಮುಂಜಾಗ್ರತಾ ಕ್ರಮವಾಗಿ 25 ಸಾವಿರ ಮಂದಿ ಸೆರೆ

Update: 2022-11-17 02:44 GMT

ಅಹ್ಮದಾಬಾದ್/ ಸೂರತ್: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಹದಿನೈದು ದಿನ ಬಾಕಿ ಇರುವಂತೆಯೇ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅಹ್ಮದಾಬಾದ್ ಮತ್ತು ಸೂರತ್‍ನಲ್ಲಿ ಈಗಾಗಲೇ 25 ಸಾವಿರ ಮಂದಿಯನ್ನು ಬಂಧಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ನ. 3ರಂದು ಚುನಾವಣೆ ಘೋಷಣೆಯಾದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು, ಸಿಆರ್‍ಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಮತ್ತು ಸಮಾಜ ಘಾತುಕ ಚಟುವಟಿಕೆಗಳ ತಡೆ ಕಾಯ್ದೆಯಡಿ ದೊಡ್ಡ ಪ್ರಮಾಣದಲ್ಲಿ ಬಂಧಿಸುತ್ತಿದ್ದಾರೆ. ಮತದಾರರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುವ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗದ ಸೂಚನೆ ಅನ್ವಯ ಈ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‍ನ ಪ್ರಮುಖ ನಗರ ಸೂರತ್‍ನಲ್ಲಿ ಗರಿಷ್ಠ ಅಂದರೆ 12965 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ. ಅಹ್ಮದಾಬಾದ್‍ನಲ್ಲಿ 12315 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತರ ಪೈಕಿ ಬಹುತೇಕ ಮಂದಿ ಚಾಕು ಹಾಗೂ ದೊಣ್ಣೆಗಳನ್ನು ಹೊಂದಿದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ಕಳ್ಳತನ ಮತ್ತಿತರ ಅಪರಾಧ ಕೃತ್ಯಗಳಲ್ಲಿ ಬಂಧಿತರಾಗಿದ್ದವರನ್ನು ಕೂಡಾ ಬಂಧಿಸಲಾಗಿದೆ ಎಂದು ಸೂರತ್ ಪೊಲೀಸರು ಹೇಳಿದ್ದಾರೆ. ವಡೋದರಲ್ಲಿ 160 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

Similar News