ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಿಂದ ಹೊರದಬ್ಬಿದ ಟಿಟಿಇ: ಕಾಲು ಕಳೆದುಕೊಂಡ ಸೈನಿಕ

Update: 2022-11-18 02:17 GMT

ಬರೇಲಿ: ರಾಜಧಾನಿ ಎಕ್ಸ್‌ಪ್ರೆಸ್ (Rajdhani express) ರೈಲಿನ ಟಿಟಿಇ ಗುರುವಾರ ಬರೇಲಿ ರೈಲು ನಿಲ್ದಾಣದ ಬಳಿ ಸೈನಿಕರೊಬ್ಬರನ್ನು ರೈಲಿನಿಂದ ಹೊರಕ್ಕೆ ತಳ್ಳಿದ ಪ್ರಕರಣ ವರದಿಯಾಗಿದೆ.

ರಜಪೂತ್ ರೈಫಲ್ಸ್‌ಗೆ (Rajputana Rifles) ಸೇರಿದ ಸೋನುಕುಮಾರ್ ಸಿಂಗ್ ಎಂಬ 29 ವರ್ಷ ವಯಸ್ಸಿನ ಸೈನಿಕ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಮಿಲಿಟರಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ದಿಬ್ರೂಗಢ- ಹೊಸದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು (20503) ಬರೇಲಿ ನಿಲ್ದಾಣದಲ್ಲಿ ನಿಲುಗಡೆಯ ಬಳಿಕ ಬೆಳಗ್ಗೆ 9.30ಕ್ಕೆ ಹೊರಟಿದ್ದು, ಕರ್ತವ್ಯಕ್ಕಾಗಿ ಬಲಿಯಾ ಜಿಲ್ಲೆಯ ಸೋನುಕುಮಾರ್ ದೆಹಲಿಗೆ ತೆರಳುವ ಸಲುವಾಗಿ ಬರೇಲಿಯಲ್ಲಿ ರೈಲು ಏರಿದ್ದರು.

"ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಕುಪನ್ ಬೋರೆ ಎಂಬ ಟಿಟಿಇ 2ನೇ ಪ್ಲಾಟ್‍ಫಾರಂನಲ್ಲಿ ರೈಲಿನಿಂದ ತಳ್ಳಿದ ಕಾರಣದಿಂದ ಕೆಳಕ್ಕೆ ಬಿದ್ದ ಸೈನಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಳಗ್ಗೆ ಬಿದ್ದಾಗ ಅವರ ಒಂದು ಕಾಲು ರೈಲಿನ ಚಕ್ರದಡಿ ಸಿಲುಕಿ ಬೇರ್ಪಟ್ಟಿದ್ದು, ಇನ್ನೊಂದು ಕಾಲು ಜಜ್ಜಿ ಹೋಗಿದೆ. ಶಸ್ತ್ರಚಿಕಿತ್ಸೆ ನಡೆಸಿ ಇದನ್ನು ಕತ್ತರಿಸಬೇಕಾಗಿದೆ" ಎಂದು ಬರೇಲಿ ಜಿಆರ್‍ಪಿ ಅಧಿಕಾರಿ ಅಜೀತ್ ಪ್ರತಾಪ್ ಸಿಂಗ್ ವಿವರಿಸಿದ್ದಾರೆ.

ಸುಬೇದಾರ್ ಹರೀಂದರ್ ಕುಮಾರ್ ಸಿಂಗ್ ಎಂಬವರು ನೀಡಿದ ದೂರಿನ ಮೇಲೆ ಭಾರತೀಯ ದಂಡಸಂಹಿತೆ ಸೆಕ್ಷನ್ 326 ಮತ್ತು 307 ರ ಅನ್ವಯ ಟಿಟಿಇ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

"ನಾನು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ. ವ್ಯಕ್ತಿಯೊಬ್ಬರು ರೈಲು ಏರಲು ಪ್ರಯತ್ನಿಸುತ್ತಿದ್ದನ್ನು ನೋಡಿದೆ. ಆಗ ಟಿಟಿಇ ಬಿ6 ಬೋಗಿಯ ಬಾಗಿಲನ್ನು ಮುಚ್ಚಿ ವ್ಯಕ್ತಿಯನ್ನು ಹೊರಕ್ಕೆ ತಳ್ಳಿದರು. ವ್ಯಕ್ತಿ ಚಲಿಸುವ ರೈಲು ಮತ್ತು ಪ್ಲಾಟ್‍ಫಾರಂ ನಡುವೆ ಬಿದ್ದರು. ತಕ್ಷಣ ಜನ ಚೀರಾಟ ನಡೆಸಿದಾಗ ಚಾಲಕ ರೈಲು ನಿಲ್ಲಿಸಿದರು. ವ್ಯಕ್ತಿಯನ್ನು ಹೊರ ತೆಗೆಯಲಾಯಿತು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ಅವರು ಸೈನಿಕ ಎನ್ನುವುದು ತಿಳಿದುಬಂತು" ಎಂದು ದೇಶ್‍ರಾಜ್ ಎಂಬ ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News