×
Ad

ಪಶ್ಚಿಮ ಬಂಗಾಳಕ್ಕೆ ಹೊಸ ರಾಜ್ಯಪಾಲರ ನೇಮಕ

Update: 2022-11-18 08:30 IST

ಹೊಸದಿಲ್ಲಿ: ನಿವೃತ್ತ ಉನ್ನತ ಅಧಿಕಾರಿ ಸಿ.ವಿ.ಆನಂದ ಬೋಸ್ (CV Ananda Bose) ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ (Governor of West Bengal) ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇವರ ನೇಮಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿ ದೃಢಪಡಿಸಿದೆ ಎಂದು ndtv.com ವರದಿ ಮಾಡಿದೆ.

"ಭಾರತದ ರಾಷ್ಟ್ರಪತಿಗಳು, ಡಾ.ಸಿ.ವಿ.ಆನಂದ ಬೋಸ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುವ ದಿನದಿಂದ ಇದು ಜಾರಿಗೆ ಬರಲಿದೆ" ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಳೆದ ಜುಲೈನಲ್ಲಿ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನ್‍ಕರ್ ಅವರು ಭಾರತದ ಉಪರಾಷ್ಟ್ರಪತಿಗಳಾದ ಬಳಿಕ ಮಣಿಪುರದ ರಾಜ್ಯಪಾಲ ಲಾ ಗಣೇಶನ್ ಅವರು ಪಶ್ಚಿಮ ಬಂಗಾಳದ ಹೊಣೆ ಹೊಂದಿದ್ದರು.

ಬೋಸ್ ಅವರು ಜವಾಹರಲಾಲ್ ನೆಹರೂ ಫೆಲೋಶಿಪ್ ಪಡೆದಿದ್ದು, ನಾಗರಿಕ ಸೇವಾ ಅಧಿಕಾರಿಗಳಿಗೆ ತರಬೇತಿ ನೀಡುವ ಮಿಸ್ಸೋರಿ ಲಾಲ್‍ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತಾತ್ಮಕ ಅಕಾಡಮಿಯ ಫೆಲೋಶಿಪ್‍ಗೆ ಪಾತ್ರರಾದ ಮೊಟ್ಟಮೊದಲ ಅಧಿಕಾರಿ. ಉತ್ತಮ ಲೇಖಕ ಮತ್ತು ಅಂಕಣಕಾರರೂ ಆಗಿರುವ ಬೋಸ್, ಇಂಗ್ಲಿಷ್, ಮಲಯಾಳಂ ಮತ್ತು ಹಿಂದಿಯಲ್ಲಿ ಕಾದಂಬರಿ, ಸಣ್ಣಕಥೆಗಳು, ಕವಿತೆ ಮತ್ತು ಪ್ರಬಂಧ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿ ಸಿದ್ಧಪಡಿಸಿದ ಕಾರ್ಯಪಡೆಯ ಅಧ್ಯಕ್ಷರಾಗಿಯೂ  ಬೋಸ್ ಕಾರ್ಯ ನಿರ್ವಹಿಸಿದ್ದರು. ಇವರ "ಎಲ್ಲರಿಗೂ ಕೈಗೆಟುಕುವ ಬೆಲೆಯ ಮನೆ" ಪರಿಕಲ್ಪನೆಯನ್ನು ಸರ್ಕಾರ ಅಳವಡಿಸಿಕೊಂಡಿತ್ತು. ಈ ಬಗ್ಗೆ ndtv.com ವರದಿ ಮಾಡಿದೆ. 

Similar News