RBI ಅನುಮತಿ ಪಡೆಯದೆ ಚುನಾವಣಾ ಬಾಂಡ್ ಯೋಜನೆಗೆ ತಿದ್ದುಪಡಿ, ಚು.ಆಯೋಗಕ್ಕೆ ಮಾತ್ರ ಮಾಹಿತಿ

ಆರ್ಟಿಐ ಅರ್ಜಿಯಿಂದ ಬಹಿರಂಗ

Update: 2022-11-20 12:49 GMT

ಹೊಸದಿಲ್ಲಿ,ನ.20: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಾಂಡ್ ಗಳ  ಮಾರಾಟಕ್ಕೆ ಹೆಚ್ಚುವರಿ ಅವಕಾಶವನ್ನು ಒದಗಿಸಿರುವ ಚುನಾವಣಾ ಬಾಂಡ್ ಯೋಜನೆಗೆ ತಿದ್ದುಪಡಿಯ ಕುರಿತು ಕೇಂದ್ರ ಸರಕಾರವು ಆರ್ಬಿಐ (RBI) ಜೊತೆ ಸಮಾಲೋಚಿಸಿಯೇ ಇರಲಿಲ್ಲ ಮತ್ತು ಚುನಾವಣಾ ಆಯೋಗಕ್ಕೆ ಮಾತ್ರ ಮಾಹಿತಿಯನ್ನು ನೀಡಿತ್ತು ಎಂಬ ಆಘಾತಕಾರಿ ಅಂಶವನ್ನು ಆರ್ಟಿಐ (RTI) ಅರ್ಜಿಗೆ ಲಭಿಸಿರುವ ಉತ್ತರವು ಬಹಿರಂಗಗೊಳಿಸಿದೆ.

ಆರ್ಬಿಐ (RBI) ಕಾಯ್ದೆ,1934ರ ಕಲಂ 31ರಡಿ ತನಗೆ ಪ್ರಾಪ್ತ ಅಧಿಕಾರವನ್ನು ಬಳಸಿಕೊಂಡು ಮೂಲ ಚುನಾವಣಾ ಬಾಂಡ್ ಯೋಜನೆಯನ್ನು ಕೇಂದ್ರ ಸರಕಾರವು ಅಧಿಸೂಚಿಸಿತ್ತು ಎಂಬ ವಾಸ್ತವದ ಹೊರತಾಗಿಯೂ ಈ ಬೆಳವಣಿಗೆ ನಡೆದಿದೆ.

ವಿತ್ತ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಗಳ ವರ್ಷದಲ್ಲಿ ಚುನಾವಣಾ ಬಾಂಡ್ಗಳ ಮಾರಾಟಕ್ಕೆ 15 ದಿನಗಳ ಹೆಚ್ಚುವರಿ ಅವಧಿಯನ್ನು ಒದಗಿಸಲು ಯೋಜನೆಯ ತಿದ್ದುಪಡಿಗಾಗಿ ನ.7ರಂದು ಅಧಿಸೂಚನೆಯನ್ನು ಹೊರಡಿಸಿತ್ತು.

ಸಾಮಾನ್ಯವಾಗಿ ಚುನಾವಣಾ ಬಾಂಡ್ ಗಳನ್ನು ಜನವರಿ,ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ತಲಾ ಹತ್ತು ದಿನಗಳ ಅವಧಿಗೆ ಮಾರಾಟ ಮಾಡಲಾಗುತ್ತದೆ. ಮೂಲ ಯೋಜನೆಯು ಲೋಕಸಭಾ ಚುನಾವಣೆಗಳು ನಡೆಯುವ ವರ್ಷದಲ್ಲಿ ಸರಕಾರವು ನಿರ್ದಿಷ್ಟ ಪಡಿಸಿರುವಂತೆ 30 ದಿನಗಳ ಹೆಚ್ಚುವರಿ ಅವಧಿಯನ್ನು ಒದಗಿಸಿತ್ತು.

ಈಗಿನ ತಿದ್ದುಪಡಿಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳು ನಡೆಯುವ ವರ್ಷಗಳಲ್ಲಿ ಬಾಂಡ್ಗಳ ಮಾರಾಟಕ್ಕೆ ಹೆಚ್ಚುವರಿಯಾಗಿ 15 ದಿನಗಳನ್ನು ಒದಗಿಸಿವೆ.

ನ.7ರ ಅಧಿಸೂಚನೆಯ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತ ಕಮೊಡೋರ್(ನಿ) ಲೋಕೇಶ ಕೆ.ಬಾತ್ರಾ ಅವರು ನ.9ರಂದು ಆರ್ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ‘ಚುನಾವಣಾ ಬಾಂಡ್ ತಿದ್ದುಪಡಿ ಯೋಜನೆ 2022 ’ ಮತ್ತು ಅಧಿಸೂಚನೆಗೆ ಸಂಬಂಧಿಸಿದ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಡತಗಳ ವಿಷಯ,ಹೆಸರು ಮತ್ತು ಉಲ್ಲೇಖ ಸಂಖ್ಯೆಗಳನ್ನು ಬಾತ್ರಾ ತನ್ನ ಅರ್ಜಿಯಲ್ಲಿ ಕೋರಿದ್ದರು.

ಉತ್ತರದಲ್ಲಿ ಬಾತ್ರಾ ಅವರಿಗೆ ಲಭ್ಯವಾಗಿರುವ ದಾಖಲೆಗಳು ಸರಕಾರವು ಚುನಾವಣಾ ಬಾಂಡ್ ಯೋಜನೆಗೆ ತಿದ್ದುಪಡಿ ಕುರಿತು ಆರ್ಬಿಐ ಜೊತೆಗೆ ಸಮಾಲೋಚಿಸಿದಂತಿಲ್ಲ ಮತ್ತು ಬೆಳವಣಿಗೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾತ್ರ ಮಾಹಿತಿ ನೀಡಿತ್ತು ಎನ್ನುವುದನ್ನು ಬಹಿರಂಗಗೊಳಿಸಿವೆ.

ಚುನಾವಣಾ ಬಾಂಡ್ ಯೋಜನೆಯ ಅಧಿಸೂಚನೆಯನ್ನು ಆರ್ಬಿಐ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿ ಹೊರಡಿಸಲಾಗಿತ್ತಾದರೆ,ಅಧಿಸೂಚನೆಗೆ ತಿದ್ದುಪಡಿಯನ್ನು ಮಾಡುವಾಗ ಆರ್ಬಿಐ ಅನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು ಎನ್ನುವುದನ್ನು ಲಭ್ಯ ದಾಖಲೆಗಳು ಸ್ಪಷ್ಟ ಪಡಿಸಿವೆ ಎಂದು ಬಾತ್ರಾ ತಿಳಿಸಿದರು.
 
2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಕೇಂದ್ರ ಸರಕಾರವು ಚುನಾವಣಾ ಬಾಂಡ್ಗಳ ಮಾರಾಟಕ್ಕಾಗಿ ದಿನಗಳ ಸಂಖ್ಯೆಯನ್ನು ನಿರಂಕುಶವಾಗಿ ಹೆಚ್ಚಿಸಿದ್ದಾಗ ಅನುಮತಿಸಲಾದ ಅವಧಿಯನ್ನು ಮೀರಿ ಬಾಂಡ್ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತಾಕೀತು ಮಾಡಿತ್ತು ಎನ್ನುವುದನ್ನೂ ದಾಖಲೆಗಳು ತೋರಿಸಿವೆ.
ತಿದ್ದುಪಡಿ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿಯನ್ನಷ್ಟೇ ನೀಡಲಾಗಿತ್ತು,ಆದರೆ ಅದರ ಒಪ್ಪಿಗೆಯನ್ನೆಂದಿಗೂ ಪಡೆದುಕೊಂಡಿರಲಿಲ್ಲ ಎನ್ನುವುದನ್ನೂ ದಾಖಲೆಗಳು ಬೆಟ್ಟು ಮಾಡಿವೆ.‌

ಕೃಪೆ: Thewire.in

Similar News