ಫಿಫಾ ವಿಶ್ವಕಪ್‌ ಉದ್ಘಾಟನಾ ವೇದಿಕೆಯಲ್ಲಿ ಕುರ್‌ಆನ್‌ ಪಠಿಸಿದ ಘಾನಿಂ ಅಲ್‌ ಮುಫ್ತಾಹ್‌ ಯಾರು ಗೊತ್ತೇ?

ಕಾಲಿಲ್ಲದ ವ್ಯಕ್ತಿ, ಕಾಲ್ಚೆಂಡಾಟದ ವಿಶ್ವಕಪ್ ರಾಯಭಾರಿ !

Update: 2022-11-21 06:34 GMT

ದೋಹಾ: ಹಾಲಿವುಡ್ ತಾರೆ ಮೋರ್ಗನ್ ಫ್ರೀಮನ್  (Morgan Freeman) ರವಿವಾರ FIFA ವಿಶ್ವಕಪ್ ಕತರ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭರವಸೆ, ಏಕತೆ ಮತ್ತು ಸಹಿಷ್ಣುತೆಯ ಸಂದೇಶವನ್ನು ನೀಡಿದರು.

ಈ ವೇಳೆ ಫ್ರೀಮನ್ ಜೊತೆ ವೇದಿಕೆ ಹಂಚಿಕೊಂಡವರು ಕತಾರಿ ಯುವ ಐಕಾನ್ ಘಾನಿಂ ಅಲ್ ಮುಫ್ತಾಹ್ (Ghanim Al Muftah). FIFA ವಿಶ್ವಕಪ್‌ನ ರಾಯಭಾರಿಯಾಗಿರುವ ಮುಫ್ತಾ ಅವರು ವೈವಿಧ್ಯತೆ ಮತ್ತು ಸ್ವೀಕಾರದ ಸಂದೇಶವನ್ನು ಹಂಚಿಕೊಳ್ಳಲು ಕುರಾನ್‌ನ ಸೂಕ್ತಗಳನ್ನು ಪಠಿಸಿದರು.

ಅಲ್-ಮುಫ್ತಾಹ್, ಎಲ್ಲರ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಕುರಿತು ಮಾತುಗಳನ್ನು ಹೇಳುವಾಗ ಕುರ್‌ಆನ್‌ ಸೂಕ್ತವನ್ನು ಉಲ್ಲೇಖಿಸಿದ್ದಾರೆ: "ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ. (ಸೂರಾ ಅಲ್ ಹುಜುರಾತ್: 13)"

ಘಾನಿಂ ಅಲ್ ಮುಫ್ತಾ ಅವರು ಅವಳಿ ಸಹೋದರನಾಗಿದ್ದು, ಕಾಡಲ್ ರಿಗ್ರೆಷನ್ ಸಿಂಡ್ರೋಮ್‌ನೊಂದಿಗೆ ಜನಿಸಿದರು. ಇದು ಅಪರೂಪದ ರೋಗ ಪ್ರಕಾರವಾಗಿದ್ದು, ಅದು ಕೆಳ ಬೆನ್ನುಮೂಳೆಯ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ.

 (ಘಾನಿಂ ಅಲ್ ಮುಫ್ತಾ: Photo/Twitter)

ವೈದ್ಯರು ಮುಫ್ತಾಹ್ ಬದುಕುಳಿಯುವ ಕೆಲವೇ ಕೆಲವು ಅವಕಾಶಗಳನ್ನು ನೀಡಿದ್ದರು. ಆದರೆ ಅವರು ತಮ್ಮ ಹದಿನೈದು ವರ್ಷಗಳ ನಂತರವೂ ಬದುಕಿನಲ್ಲಿ ಉತ್ತಮ ಸಾಧನೆಗೈಯಲು ಪ್ರಾರಂಭಿಸಿದರು. ಅವರ ಕಥೆಯು ಪ್ರಪಂಚದಾದ್ಯಂತದ ಯುವಕರು ಮತ್ತು ವಿಕಲಚೇತನರಿಗೆ ಪ್ರಮುಖ ಮತ್ತು ಅಸಾಧಾರಣ ಉದಾಹರಣೆಯಾಗಿದೆ. ಹಲವರನ್ನು ಸಾಧನೆಯ ಹಾದಿಗೆ ಪ್ರೇರೇಪಿಸಿದೆ.

ವರ್ಷಂಪ್ರತೀ, ಮುಫ್ತಾಹ್ ಯುರೋಪ್‌ನಲ್ಲಿ ಪರಿಣಿತ ಶಸ್ತ್ರಚಿಕಿತ್ಸಾ ಆರೈಕೆಯನ್ನು ಪಡೆಯುತ್ತಾರೆ.

ಭವಿಷ್ಯದ ಪ್ಯಾರಾಲಿಂಪಿಯನ್ ಆಗುವ ಭರವಸೆ‌ ಮುಫ್ತಾಹ್‌ ಗೆ ಇದೆ. ತನ್ನ ವಿಕಲಾಂಗತೆಗಳ ಹೊರತಾಗಿಯೂ, ಈಜು, ಸ್ಕೂಬಾ ಡೈವಿಂಗ್, ಫುಟ್ಬಾಲ್, ಹೈಕಿಂಗ್ ಮತ್ತು ಸ್ಕೇಟ್‌ ಬೋರ್ಡಿಂಗ್ ಅನ್ನು ತನ್ನ ನೆಚ್ಚಿನ ಕ್ರೀಡೆಗಳೆಂದು ಮುಫ್ತಾಹ್‌ ಪಟ್ಟಿ ಮಾಡುತ್ತಾರೆ.

ಶಾಲೆಯಲ್ಲಿ ಮುಫ್ತಾ ತನ್ನ ಕೈಯಲ್ಲಿ ಬೂಟುಗಳನ್ನು ಧರಿಸಿ ಫುಟ್‌ಬಾಲ್ ಆಡುತ್ತಿದ್ದರು. ಜೊತೆಗೆ ಇಡೀ ಗಲ್ಫ್ ಪ್ರದೇಶದ ಅತಿ ಎತ್ತರದ ಪರ್ವತ ಶಿಖರವಾದ ಜಬಲ್ ಶಮ್ಸ್ ಅನ್ನೂ ಅವರು ಏರಿದ್ದಾರೆ. ಮುಂದೆ ಮೌಂಟ್ ಎವರೆಸ್ಟ್ ಅನ್ನು ಏರುವ ಉದ್ದೇಶವನ್ನು ಹೊಂದಿದ್ದಾರೆ.

Instagram ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಲ್-ಮುಫ್ತಾ ಅವರು ಕತಾರ್‌ನ ಭವಿಷ್ಯದ ಪ್ರಧಾನ ಮಂತ್ರಿಯಾಗುವ ಆಗ್ರಹದೊಂದಿಗೆ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡುವ ಗುರಿಯನ್ನೂ ಹೊಂದಿದ್ದಾರೆ.

Similar News