ಬಿಜೆಪಿ ಶಾಸಕನಿಂದ ದೌರ್ಜನ್ಯ, ಕಿರುಕುಳದ ಆರೋಪ: ದಯಾ ಮರಣಕ್ಕೆ ಮೊರೆ ಹೋದ ದಲಿತ ಕುಟುಂಬ

ಕಲ್ಯಾಣಮಂಟಪ, ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ನಿರಾಕರಿಸಿದ್ದಕ್ಕಾಗಿ ‘ಕಿರುಕುಳ’

Update: 2022-11-22 03:38 GMT

ಬೆಂಗಳೂರು: ಎರಡು ಎಕರೆ ಜಮೀನಿನಲ್ಲಿ ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ನಿರಾಕರಿಸಿದ ಕಾರಣಕ್ಕೆ ಬಿಜೆಪಿ ಶಾಸಕ ಕೃಷ್ಣಪ್ಪಮತ್ತು ಅವರ ಬೆಂಬಲಿಗರು ದೌರ್ಜನ್ಯ ಮತ್ತು ನಿರಂತರವಾಗಿ ಕಿರುಕುಳಕ್ಕೆ ಬೇಸತ್ತ ದಲಿತ ಕುಟುಂಬವೊಂದು ದಯಾಮರಣಕ್ಕೆ ಮೊರೆ ಹೋಗಿದೆ.

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯಿ ಪಿಲ್ಲಗಾನಹಳ್ಳಿ ಗ್ರಾಮದ ದಿವಂಗತ ನಾರಾಯಣಪ್ಪ ಅವರ ಕುಟುಂಬ ಸದಸ್ಯರ ಪೈಕಿ ಎಸ್ ಮಂಜುಳಾ ಎಂಬವರು ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ದಯಾಮರಣ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದಾರೆ. 2022ರ ನವೆಂಬರ್ 19ರಂದು ಈ ಕುಟುಂಬದ ಸದಸ್ಯರು ಸಲ್ಲಿಸಿರುವ ಮನವಿಯ ಪ್ರತಿಯು ''the-file.in''ಗೆ ಲಭ್ಯವಾಗಿದೆ.

‘90 ವರ್ಷಗಳಿಂದ ನಮ್ಮ ಕುಟುಂಬದವರು ಮೂರು ತಲೆಮಾರುಗಳಿಂದ ಈ ಜಾಗದಲ್ಲಿ  ವಾಸ ಮಾಡುತ್ತಿದ್ದೇವೆ.  ಕಳೆದ 4 ವರ್ಷಗಳಿಂದ ಶಾಸಕ ಎಂ.ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು,  ಸ್ಥಳೀಯ ಭೂಗಳ್ಳರು,  ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ರಾಮಲಕ್ಷ್ಮಣಯ್ಯ, ಮತ್ತು ದಿನೇಶ್, ಕಿರುಕುಳ, ದೌರ್ಜನ್ಯ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಅತ್ಮಹತ್ಯೆ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವೆಂದು ತಮಗೆ ಈ ಮೂಲಕ ದಯಾಮರಣಕ್ಕೆ ಮನವಿ ಸಲ್ಲಿಸುತ್ತಿದ್ದೇವೆ,’ ಎಂದು ಅಳಲು ತೋಡಿಕೊಂಡಿದ್ದಾರೆ.

ವಾಸ ಮಾಡುತ್ತಿರುವ ಜಾಗದಲ್ಲಿ ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣ ಮಾಡಲು ಜಾಗ ನೀಡಬೇಕು ಎಂದು ಶಾಸಕ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರಾದ ಸಂಪಂಗಿ ಎಂಬುವರು ನಿರಂತರವಾಗಿ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರಿರುವ ಮಂಜುಳ ಎಂಬವರು ಅವರ ಬೇಡಿಕೆಯನ್ನು ಒಪ್ಪದಿದ್ದಾಗ ಅವರ ಮೇಲೆ ದೌರ್ಜನ್ಯ, ಕಿರುಕುಳ ನೀಡಿದರು ಎಂಬುದನ್ನು ಮನವಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನಮ್ಮ ಆಸ್ತಿಯನ್ನು ಕಬಳಿಸಿ ನಮ್ಮನ್ನು ಬೀದಿಪಾಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಈ ಆಸ್ತಿ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇರುವುದಿಲ್ಲ. 10ರಿಂದ 15 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಅಲೆಯತ್ತಿದ್ದೇವೆ.  ಅದರ ಸಲುವಾಗಿ ಸಾಲ ಮಾಡಿಕೊಂಡು ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗದೇ ಅಲೆದಿದ್ದೇವೆ. ನ್ಯಾಯಾಲಯದ ಮೂಲಕ ಆಸ್ತಿಯನ್ನು ನಮ್ಮಂತೆ ಪಡೆದುಕೊಂಡಿರುತ್ತೇವೆ. ಇವರುಗಳು ನಮ್ಮಂಥ ದಲಿತರನ್ನು ಬೆದರಿಸಿ ಆಸ್ತಿಯನ್ನೂ ಕಿತ್ತುಕೊಂಡು ನಮ್ಮನ್ನೇ ಭೂಗಳ್ಳರು ಎಂದು ಪಟ್ಟ ಕಟ್ಟಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.

ಆ ಸ್ಥಳದ ಮೇಲೆ ಸಿವಿಲ್ ಮೊಕದ್ದಮೆಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿರುವ ಮನವಿದಾರರು, 2 ವರ್ಷಗಳಿಂದ ಸಿವಿಲ್ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದೇವೆ. (ಪ್ರಕರಣಗಳು ಸಂಖ್ಯೆಗಳು ;306/2021, 308/2021, 310/2021, 493/2021, 978/2021) ಈ ದಾವೆಗಳನ್ನು ಪರಿಗಣಿಸದೇ ಇವರುಗಳು ನಮ್ಮ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಮಗೆ ನೀಡುತ್ತಿರುವ ಕಿರುಕುಳ , ಹಿಂಸೆಯಿಂದ ನಮ್ಮ ಇಡೀ ಕುಟುಂಬವು ಮನೆಯಿಂದ ಹೊರಗಡೆ ಬರಲುಸಾಧ್ಯವಾಗದೇ ಮನೆಯೊಳಗೂ ಇರಲು ಸಾಧ್ಯವಾಗದೇ ನೋವಿನಿಂದ ಬೆಂದು  ಹೋಗಿದ್ದೇವೆ. ನಮಗೂ ಸಹ ಜೀವ ಬೆದರಿಕೆ ಇದೆ ಎಂದು ವಿವರಿಸಿದ್ದಾರೆ.

2020ರಲ್ಲಿ ಈ ಸ್ಥಳದಲ್ಲಿ ಪೆಟ್ರೋಲ್ ಬಂಕ್ ಮಾಡಲು ನೀಡಬೇಕು ಎಂದು  ಕೃಷ್ಣಪ್ಪ ಅವರ ಬೆಂಬಲಿಗರಾದ ಸಂಪಂಗಿ ಎಂಬುವರು ಕೇಳಿದ್ದನ್ನು ಈ ಕುಟುಂಬವು  ನಿರಾಕರಿಸಿತ್ತು. ಕೋವಿಡ್ ನೆಪವಾಗಿರಿಸಿಕೊಂಡು  ಸ್ಥಳೀಯ ಕಾರ್ಪೋರೇಟರ್‌ನೊಂದಿಗೆ ಸೇರಿ ಈ ಸ್ಥಳದಲ್ಲಿ ಮೂರು ದಿನಗಳ ಮಟ್ಟಿಗೆ ತರಕಾರಿ ಮಾರುಕಟ್ಟೆ ಹಾಕಿಸಿ ಕುಟುಂಬದ ಸದಸ್ಯರನ್ನು ಹೆದರಿಸಲಾಗಿತ್ತು ಎಂಬ ಅಂಶವು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮನವಿದಾರರಾದ ಮಂಜುಳಾ ಅವರ ತಾತನವರಿಗೆ 1950ರಲ್ಲಿ 2 ಎಕರೆ ಜಮೀನು ಮಂಜರಾಗಿತ್ತು. ಈ ಜಾಗದಲ್ಲಿ  45 ವರ್ಷಗಳ ಕಾಲ ವ್ಯವಸಾಯ ಮಾಡಲಾಗುತ್ತಿತ್ತು.  ಕಾರಣಾಂತರಗಳಿಂದ 1992ರಲ್ಲಿ ಪರಮಾನಂದ ಹಾಗೂ ಗಜೇಂದ್ರನ್ ಎಂಬುವರಿಗೆ ವರ್ಗಾವಣೆಯಾಗಿದೆ.  ಈ ವ್ಯಕ್ತಿಗಳಿಂದ 1995-96ರಲ್ಲಿ ಪುಟ್ಟರಾಜು ಮತ್ತು ಅಶೋಕ್ ಕುಮಾರ್ ಎಂಬವರಿಗೆ ತಲಾ 1 ಎಕರೆಯಂತೆ ವರ್ಗಾವಣೆಯಾಗಿತ್ತು.  ಇದೇ ಸಂದರ್ಭದಲ್ಲಿ  ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಪಿಲ್ಲಗಾನಹಳ್ಳಿ ಗ್ರಾಮದಲ್ಲಿ 1998-99ರಲ್ಲಿ ಕೆಐಎಡಿಬಿಗೆ ಕೆಲವು ಭೂಮಿಗಳು ಸ್ವಾಧೀನಕ್ಕೆ ಒಳಪಟ್ಟಿದ್ದವು.

ಸರ್ವೇ ನಂಬರ್ 2ರಲ್ಲಿ ಆಕಾರ್ ಬಂದ್‌ನಂತೆ 32.19 ಎಕರೆ ಇದೆ. ಇದರ ಪೈಕಿ 28.19 ಎಕರೆ ಭೂ ಸ್ವಾಧೀನಕ್ಕೆ ಒಳಪಟ್ಟಿದೆ. ಇದರಲ್ಲಿಮಂಜುಳಾ ಅವರಿಗೆ ಸೇರಿದ ಜಮೀನು ಸರ್ವೇ ನಂಬರ್ 2 ಹಿಸ್ಸಾ ನಂಬರ್ 15 ಇದೆ. ಇದು ಭೂ ಸ್ವಾಧೀನಕ್ಕೆ  ಒಳಪಟ್ಟಿರುವುದಿಲ್ಲ. ಸ್ಥಳ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 2005ರಲ್ಲಿ ಪಿಟಿಸಿಎಲ್  ಪ್ಕರರಣವನ್ನು ದಾಖಲಿಸಿದ ಕಾರಣ 2016ರವರೆಗೂ ದಾವೆ ನಡೆದಿತ್ತು ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

2016ರಲ್ಲಿ ಮಂಜುಳಾ ಅವರ ಪರವಾಗಿ ಆದೇಶ ಹೊರಬಿದ್ದಿದೆ. ಆದೇಶದ ನಂತರ 2 ಎಕರೆ ಜಮೀನಿಗೆ ಪಹಣಿ ಮಾಡದೇ ಅಧಿಕಾರಿಗಳು  ಕೇವಲ ಒಂದು ಎಕರೆಗೆ ಮಾತ್ರ  ಪಹಣಿ ಮಾಡಿಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದ ಮಂಜುಳ ಅವರಿಗೆ ’ ನೀವು ಉಚ್ಛ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡಿದರು. ಮತ್ತೆ ಕೋರ್ಟ್ ಅಲೆಯುವ ಶಕ್ತಿ ಇಲ್ಲದ ಕಾರಣ 1 ಎಕರೆ ಜಮೀಣಿಗೆ ಪಹಣಿ ಮಾಡಿಸಿಕೊಂಡೆವು. ಕೋರ್ಟ್ ಆದೇಶದಂತೆ ಸರ್ವೇ ಮಾಡಿ ಪೋಡಿ ಮಾಡಿ ಸ್ವಾಧೀನಕ್ಕೆ ಬಿಟ್ಟುಕೊಡುವಂತೆ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದೆವು ಎಂದು ವಿವರಿಸಿದ್ದಾರೆ.

Similar News