ಇಂಡೋನೇಶ್ಯಾ: ಭೂಕಂಪದಲ್ಲಿ ಮೃತರ ಸಂಖ್ಯೆ 268ಕ್ಕೆ ಏರಿಕೆ

Update: 2022-11-22 18:07 GMT

ಜಕಾರ್ತ, ನ.22: ಇಂಡೊನೇಶ್ಯಾ(Indonesia)ದ ಜಾವಾ ದ್ವೀಪ(Island of Java)ದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 268ಕ್ಕೇರಿದೆ. ಕುಸಿದು ಬಿದ್ದ ಕಟ್ಟಡಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು ಅವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಕಂಪದಿಂದಾಗಿ ಹಲವೆಡೆ ಭೂಕುಸಿತ ಮತ್ತು ಕಟ್ಟಡ ಕುಸಿತದಿಂದಾಗಿ ರಸ್ತೆಯ ಮೇಲೆ ಕಲ್ಲು ಮಣ್ಣಿನ ರಾಶಿ ಬಿದ್ದಿದ್ದು ರಸ್ತೆ ಸಂಚಾರ ಮೊಟಕುಗೊಂಡಿದೆ. ಭಾರೀ ಪ್ರಮಾಣದಲ್ಲಿ ಕಟ್ಟಡಗಳ ಅವಶೇಷ ರಾಶಿ ಬಿದ್ದಿರುವುದರಿಂದ ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ತಡೆಯಾಗಿದ್ದು ಇನ್ನೂ ಕನಿಷ್ಟ 151 ಮಂದಿ ನಾಪತ್ತೆಯಾಗಿದ್ದಾರೆ. 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಂತ್ರಸ್ತರ ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ.

ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪ  ಇಂಡೋನೇಶ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತವಾದ  ಪಶ್ಚಿಮ ಜಾವದ ಸಿಯಾಂಜರ್ (Cianger)ನಗರದ ಬಳಿಯಲ್ಲಿ ಕೇಂದ್ರೀಕೃತವಾಗಿತ್ತು. ಈ ನಗರದಲ್ಲಿ ಅತ್ಯಧಿಕ ಹಾನಿ, ಸಾವು ನೋವು ಸಂಭವಿಸಿದೆ. ಶಾಲೆಯ ಕಟ್ಟಡ ಕುಸಿದ ಕಾರಣ ಹಲವು ಮಕ್ಕಳು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸುಹರ್ಯಂತೊ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಈ ಮಧ್ಯೆ,  ಭೂಕಂಪದಲ್ಲಿ ಸಂತ್ರಸ್ತರಾದವರ ಕುಟುಂಬಕ್ಕೆ  ಪರಿಹಾರ ನೀಡುವುದಾಗಿ ಇಂಡೊನೇಶ್ಯಾ ಅಧ್ಯಕ್ಷ ಜೋಕೊ ವಿಡೋಡೊ ಘೋಷಿಸಿದ್ದಾರೆ. ಅವರು ಮಂಗಳವಾರ ಸಿಯಾಂಜರ್ ನಗರಕ್ಕೆ ಭೇಟಿ ನೀಡಿ ಭೂಕಂಪದಿಂದ ಹಾನಿಗೊಳಗಾದ ಪ್ರದೇಶದ ವೀಕ್ಷಣೆ ನಡೆಸಿ, ಶೋಧ ಮತ್ತು ರಕ್ಷಣೆ ಕಾರ್ಯವನ್ನು ತ್ವರಿತಗೊಳಿಸುವಂತೆ ರಕ್ಷಣಾ ತಂಡಕ್ಕೆ ಸೂಚಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.  

Similar News