ಹೆರಿಗೆ ನೋವಿನಿಂದ ಬಳಲುತ್ತಿದ್ದ ಎಚ್‌ಐವಿ ಸೋಂಕಿತ ಮಹಿಳೆಯನ್ನು ಸ್ಪರ್ಶಿಸಲು ನಿರಾಕರಿಸಿದ ವೈದ್ಯರು, ಮಗು ಮೃತ್ಯು
ಕುಟುಂಬಸ್ಥರ ಆರೋಪ
ಫಿರೋಝಾಬಾದ್ : ಉತ್ತರ ಪ್ರದೇಶದಲ್ಲಿ ಎಚ್‌ಐವಿ ಸೋಂಕಿತ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಸರಕಾರಿ ಆಸ್ಪತ್ರೆಯ ವೈದ್ಯರು ಆಕೆಯನ್ನು ಸ್ಪರ್ಶಿಸಲು ನಿರಾಕರಿಸಿದ ಕಾರಣ ಆಕೆ ಮಗುವನ್ನು ಕಳೆದುಕೊಂಡಿದ್ದಾರೆ ಎಂದು ಮಹಿಳೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಆಸ್ಪತ್ರೆಯ ಮುಖ್ಯಸ್ಥರು ಮಧ್ಯ ಪ್ರವೇಶಿಸಿದ ನಂತರವೇ ಫಿರೋಝಾಬಾದ್‌ನ ಆಸ್ಪತ್ರೆಯ ವೈದ್ಯರು ಮಹಿಳೆಯ ಪ್ರಸವಕ್ಕೆ ವ್ಯವಸ್ಥೆ ಮಾಡಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಆಸ್ಪತ್ರೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ.
ಸೋಮವಾರ ಮಧ್ಯಾಹ್ನ 20 ವರ್ಷದ ಮಹಿಳೆಯನ್ನು ಆಕೆಯ ಪೋಷಕರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತಂದಿದ್ದಾರೆ.
''ಮೊದಲು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೇಸ್ ಜಟಿಲವಾಗಿದೆ ಎಂದು ಹೇಳಿ 20,000 ರೂ. ನೀಡುವಂತೆ ಬೇಡಿಕೆ ಇಟ್ಟರು. ನನ್ನ ಬಳಿ ಹಣವಿರಲಿಲ್ಲ, ಹೀಗಾಗಿ ಈ ಆಸ್ಪತ್ರೆಗೆ ಕರೆತಂದಿದ್ದೆವು. ವೈದ್ಯರು ನನ್ನ ಮಗಳನ್ನು ಮುಟ್ಟಲೂ ಇಲ್ಲ, ಮಗಳು ಹಾಸಿಗೆ ಮೇಲೆ ಮಲಗಿದ್ದಳು. ನೋವಿನಿಂದ ಒದ್ದಾಡುತ್ತಿದ್ದಳು. ನಂತರ ನಾನು ಮೇಡಂನನ್ನು (ಆಸ್ಪತ್ರೆಯ ಉಸ್ತುವಾರಿ) ಸಂಪರ್ಕಿಸಿದ್ದೆ ಹಾಗೂ ಅವರು ಬಂದು ಹೇಳಿದ ನಂತರ ರಾತ್ರಿ 9.30 ಕ್ಕೆ ಆಪರೇಷನ್ ಮಾಡಲಾಯಿತು ”ಎಂದು ಮಹಿಳೆಯ ತಂದೆ ಸುದ್ದಿಗಾರರಿಗೆ ತಿಳಿಸಿದರು.