500 ಕೆ.ಜಿ. ಗಾಂಜಾ ತಿಂದ ಇಲಿಗಳು: ಕೋರ್ಟ್‍ಗೆ ಉತ್ತರಪ್ರದೇಶ ಪೊಲೀಸರು ಮಾಹಿತಿ!

Update: 2022-11-24 03:02 GMT

ಆಗ್ರಾ: ಮುಟ್ಟುಗೋಲು ಹಾಕಿಕೊಂಡು ಇಲ್ಲಿನ ಶೇರ್‍ಗಡ್ ಮತ್ತು ಹೈವೇ ಪೊಲೀಸ್ ಸ್ಟೇಷನ್‍ನಲ್ಲಿ ದಾಸ್ತಾನು ಮಾಡಲಾಗಿದ್ದ 500 ಕೆಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಮಥುರಾ ಪೊಲೀಸರು ಬುಧವಾರ ವಿಶೇಷ ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೊಥೆರಪಿಕ್ ಸಬ್‍ಸ್ಟೆನ್ಸಸ್ ಕಾಯ್ದೆ (1985) ನ್ಯಾಯಾಲಯಕ್ಕೆ (special Narcotic Drugs and Psychotropic Substances Act court) ಮಾಹಿತಿ ನೀಡಿದ್ದಾರೆ!‌

ಎನ್‍ಡಿಪಿಎಸ್ ಕಾಯ್ದೆಯಡಿ ದಾಖಲಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೋರ್ಟ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಮಥುರಾ ಪೊಲೀಸರು ಈ ಹೇಳಿಕೆ ನೀಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಥುರಾ ಎಸ್‍ಎಸ್‍ಪಿ ಅಭಿಷೇಕ್ ಯಾದವ್ ಅವರಿಗೆ ಇಲಿ ಕಾಟ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಹಾಗೂ ಬಳಿಕ 60 ಲಕ್ಷ ರೂಪಾಯಿ ಮೌಲ್ಯದ 581 ಕೆಜಿ ಗಾಂಜಾವನ್ನು ವಾಸ್ತವವಾಗಿ ಇಲಿಗಳೇ ಸೇವಿಸಿವೆ ಎನ್ನುವುದಕ್ಕೆ ಸೂಕ್ತ ಪುರಾವೆಗಳನ್ನು ನೀಡಿ ಎಂದು ಆದೇಶಿಸಿದರು.

ಪೊಲೀಸ್ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗುವ ಗಾಂಜಾ ಎಲೆಗಳನ್ನು ಹರಾಜು ಮಾಡಲು/ ವಿಲೇವಾರಿ ಮಾಡಲು ಐದು ಅಂಶಗಳ ನಿರ್ದೇಶನವನ್ನು ನ್ಯಾಯಾಲಯ ಪೊಲೀಸ್ ಇಲಾಖೆಗೆ ನೀಡಿತು. ನ್ಯಾಯಾಲಯದ ಆದೇಶಗಳಿಗೆ ಅನುಸಾರವಾಗಿ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹಂಗಾಮಿ ಹಿರಿಯ ಎಸ್‍ಎಸ್‍ಪಿ ಮಾರ್ತಾಂಡ್ ಪಿ ಸಿಂಗ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸರ್ಕಾರಿ ಅಭಿಯೋಜಕ ರಣವೀರ್ ಸಿಂಗ್, "ಉಗ್ರಾಣಗಳಲ್ಲಿ ದಾಸ್ತಾನು ಮಾಡಲಾಗಿದ್ದ 581 ಕೆಜಿ ಗಾಂಜಾವನ್ನು ಇಲಿಗಳು ಹಾಳು ಮಾಡಿವೆ ಎಂದು ಶೇರ್‍ಗಡ್ ಮತ್ತು ಹೈವೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಸೂಕ್ತ ಪುರಾವೆ ಒದಗಿಸುವಂತೆ ಸೂಚಿಸಿದ ನ್ಯಾಯಾಲಯ ನವೆಂಬರ್ 26ರಂದು ವಿಚಾರಣೆಗೆ ಮುಂದಿನ ದಿನಾಂಕ ನಿಗದಿಪಡಿಸಿದೆ. "ಇಲಿಗಳು ಗಾತ್ರದಲ್ಲಿ ಸಣ್ಣದಾಗಿದ್ದರೂ, ಅವುಗಳಿಗೆ ಪೊಲೀಸರ ಭಯ ಇಲ್ಲ. ಪ್ರತಿ ಸಮಸ್ಯೆಗಳನ್ನು ಬಗೆಹರಿಸಲು ಎಸ್‍ಎಚ್‍ಓಗಳು ತಜ್ಞರಲ್ಲ" ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News