ಫಿಫಾ ವಿಶ್ವಕಪ್: ಘಾನಾ ವಿರುದ್ಧ ಪೋರ್ಚುಗಲ್‌ಗೆ ರೋಚಕ ಜಯ

Update: 2022-11-24 18:11 GMT

ದೋಹಾ, ನ.24: ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಫಿಫಾ ವಿಶ್ವಕಪ್‌ನ ಗ್ರೂಪ್ ‘ಎಚ್’ ಪಂದ್ಯದಲ್ಲಿ ಘಾನಾ ತಂಡದ ವಿರುದ್ಧ 3-2 ಅಂತರದಿಂದ ರೋಚಕ ಜಯ ದಾಖಲಿಸಿದೆ.

ಸ್ಟೇಡಿಯಂ 974ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 37ರ ಹರೆಯದ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ 65ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ಈ ಮೂಲಕ ಐದು ವಿವಿಧ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾದರು. ವಿಶ್ವಕಪ್‌ನಲ್ಲಿ 8ನೇ ಗೋಲು ಗಳಿಸಿದ ರೊನಾಲ್ಡೊ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಲ್ಲಿ 118ನೇ ಗೋಲು ದಾಖಲಿಸಿದರು.

 ಆ್ಯಂಡ್ರೆ ಯೀವ್ 73ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಜೊವೊ ಫೆಲಿಕ್ಸ್(78ನೇ ನಿಮಿಷ) ಹಾಗೂ ರಫೆಲ್ ಲಿಯೊ(80ನೇ ನಿಮಿಷ )ತಲಾ ಒಂದು ಗೋಲು ಗಳಿಸಿ ಪೋರ್ಚುಗಲ್‌ಗೆ 3-1 ಮುನ್ನಡೆ ಒದಗಿಸಿಕೊಟ್ಟರು. ಮೂರು ನಿಮಿಷದೊಳಗೆ ಎರಡು ಗೋಲುಗಳನ್ನು ಗಳಿಸಿದ ಪೋರ್ಚುಗಲ್ ಸುಸ್ಥಿತಿಗೆ ತಲುಪಿತು. 89ನೇ ನಿಮಿಷದಲ್ಲಿ ಗೋಲು ಗಳಿಸಿದ ಉಸ್ಮಾನ್ ಬುಕಾರಿ ಘಾನಾ ತಂಡದ ಸೋಲಿನ ಅಂತರ ಕಡಿಮೆಗೊಳಿಸಿದರು.

37ರ ವಯಸ್ಸಿನ ರೊನಾಲ್ಡೊ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಎರಡನೇ ಹಿರಿಯ ಆಟಗಾರನಾಗಿದ್ದಾರೆ. 1994ರಲ್ಲಿ ಕ್ಯಾಮರೂನ್ ಪರ ರೋಜರ್ ಮಿಲ್ಲಾ ತನ್ನ 42ನೇ ವಯಸ್ಸಿನಲ್ಲಿ ಗೋಲು ಗಳಿಸಿದ್ದರು.

Similar News