ಉಡುಪಿ: ನ.28ರಂದು ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ನೌಕರರಿಗೆ ನೇರ ಪಾವತಿಗೆ ಆಗ್ರಹಿಸಿ ಬೆಂಗಳೂರು ಚಲೋ

Update: 2022-11-25 16:09 GMT

ಉಡುಪಿ, ನ.25: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೀರು ಸರಬರಾಜು ಸಹಾಯಕರು ಹಾಗೂ ಡಾಟಾ ಆಪರೇಟರ್‌ಗಳನ್ನು ಗುತ್ತಿಗೆ ಪದ್ಧತಿ ಬದಲು ನೇರಪಾವತಿಗೆ ಒಳಪಡಿಸುವಂತೆ ಆಗ್ರಹಿಸಿ ನ.28ರಂದು ಬೆಂಗಳೂರು ಚಲೋ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗ ಸಂಚಾಲಕರಾದ ಬಿ.ಕೆ.ಅಣ್ಣಪ್ಪ ಕಾರೆಕಾಡು ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ನಡೆಸಿದ ಹೋರಾಟದ ಪರಿಣಾಮವಾಗಿ ನಗರಸ್ಥಳೀಯ ಸಂಸ್ಥೆಗಳ 11,138 ಪೌರ ಕಾರ್ಮಿಕರನ್ನು ಈಗಾಗಲೇ ನೇರಪಾವತಿ ಅಡಿ ತರಲಾಗಿದೆ ಎಂದವರು ತಿಳಿಸಿದರು.

ಇನ್ನುಳಿದ ಕಸ ಸಾಗಿಸುವ ವಾಹನ ಚಾಲಕರು, ಸ್ಯಾನಿಟೈಸರ್ ಸೂಪರ್ ವೈಸರ್, ಲೋಡರ್ಸ್, ಕೀನರ್ಸ್, ಹೆಲ್ಪರ್ಸ್ ಹಾಗೂ ಯುಜಿಡಿ ಕಾರ್ಮಿಕರನ್ನು  ನೇರಪಾವತಿ ಅಡಿ ತರಲು ಸರಕಾರ ಒಪ್ಪಿಗೆ ಸೂಚಿಸಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಆದರೆ ಇದೇ ಸಂದರ್ಭದಲ್ಲಿ ಇನ್ನುಳಿದ ನೀರು ಸರಬರಾಜು ಸಹಾಯಕರು ಹಾಗೂ ಡಾಟಾ ಆಪರೇಟರುಗಳನ್ನು ನೇರಪಾವತಿ ಪ್ರಕ್ರಿಯೆಗೊಳಪಡಿಸುವುದು ಬಾರಿ ಉಳಿದಿದೆ. ಹೀಗೆ ಮಾಡುವುದರಿಂದ ಸರಕಾರಕ್ಕೆ ಶೇ.18ರಷ್ಟು ಜಿಎಸ್ಟಿ ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ.5ರ ಕಮಿಷನ್ ಉಳಿತಾಯವಾಗಲಿದೆ. ಇವೆಲ್ಲವನ್ನು ಹೊರಗುತ್ತಿಗೆ ನೌಕರರ ವೇತನಕ್ಕೆ ಸೇರ್ಪಡೆ ಗೊಳಿಸಿ ನೌಕರರ ಕಾರ್ಯದಕ್ಷತೆ ಹೆಚ್ಚಿಸಬಹುದಾಗಿದೆ ಎಂದವರು ಹೇಳಿದರು.

ಉಳಿದವರೊಂದಿಗೆ ನೇರಪಾವತಿ ಪ್ರಕ್ರಿಯೆಯಲ್ಲಿ ನೀರು ಸರಬರಾಜು ಸಹಾಯಕರು ಹಾಗೂ ದಾಟಾ ಆಪರೇಟರುಗಳನ್ನು ಸೇರಿಸಬೇಕೆಂದು ಆಗ್ರಹಿಸಿ ನ.28ರಂದು ರಾಜ್ಯಾದ್ಯಂತ ನಡೆಯುವ ಬೆಂಗಳೂರು ಚಲೋ ನಡೆಸಲಾಗುತ್ತಿದ್ದು, ಇದರಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಸಾಲಿಗ್ರಾಮಗಳ ನಗರ ಸ್ಥಳೀಯ ಸಂಸ್ಥೆ ಗಳ ಹೊರಗುತ್ತಿಗೆ ಕಾರ್ಮಿಕರು ಭಾಗವಹಿಸಲಿದ್ಧಾರೆ ಎಂದು ಅಣ್ಣಪ್ಪ ತಿಳಿಸಿದರು.

ಕೋವಿಡ್ ಕಾಲದಲ್ಲಿ ಪೌರ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಕೋವಿಡ್ ಕರ್ತವ್ಯ ಕಾಲದಲ್ಲಿ ರಾಜ್ಯದ 30 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದು, ಸರಕಾರದ ನಿಯಮಾನು ಸಾರ  ಈ ಕುಟುಂಬಗಳಿಗೆಪರಿಹಾರ ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಸಂಘದ ಅಧ್ಯಕ್ಷ ವಿನಯ್‌ಕುಮಾರ್, ಕಾರ್ಯದರ್ಶಿ ಸಂದೀಪ್ ಉಪಸ್ಥಿತರಿದ್ದರು.

Similar News