ಕಾಂಗ್ರೆಸ್ ಯಾತ್ರೆ ವೇಳೆ ಪಾಕ್ ಪರ ಘೋಷಣೆ ಆರೋಪ: ತಿರುಚಿದ ವೀಡಿಯೊ ಸಿದ್ಧಪಡಿಸಿದ ಬಿಜೆಪಿ ಮುಖಂಡನ ವಿರುದ್ಧ ಎಫ್‍ಐಆರ್

Update: 2022-11-27 04:15 GMT

ರಾಯಪುರ/ ಭೋಪಾಲ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ (Bharat Jodo Yatra) ಮಧ್ಯಪ್ರದೇಶದ ಮೂಲಕ ಹಾದುಹೋಗುವ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುದನ್ನು ಬಿಂಬಿಸಲು ತಿರುಚಿದ ವೀಡಿಯೊ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮಧ್ಯಪ್ರದೇಶ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಲೋಕೇಂದ್ರ ಪರಾಶರ್ (Madhya Pradesh BJP media cell chief Lokendra Parashar) ವಿರುದ್ಧ ಛತ್ತೀಸ್‍ಗಢ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

ಆದರೆ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಮುಖಂಡದ ಸಮರ್ಥನೆಗೆ ನಿಂತಿದ್ದು, ಈ ವೀಡಿಯೊವನ್ನು ಮೊದಲು ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್‍ನಿಂದ ಪಿಸಿಸಿ ಅಧ್ಯಕ್ಷ ಕಮಲ್‍ ನಾಥ್ ಅವರ ಕಚೇರಿಯ ಸಿಬ್ಬಂದಿ ಪೋಸ್ಟ್ ಮಾಡಿದ್ದಾಗಿ ಪ್ರತಿಪಾದಿಸಿದೆ.

ಶುಕ್ರವಾರ ವಿವಾದ ಭುಗಿಲೇಳುತ್ತಿದ್ದಂತೆಯೇ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಇದು ತಿರುಚಿದ ವೀಡಿಯೊ ಮತ್ತು ಬಿಜೆಪಿ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಛತ್ತೀಸ್‍ಗಢ ಕಾಂಗ್ರೆಸ್ ಕಾನೂನು ಘಟಕದ ಅಂಕಿತ್ ಕುಮಾರ್ ಮಿಶ್ರಾ ಎಂಬವರು ರಾಯಪುರದಲ್ಲಿ ದೂರು ದಾಖಲಿಸಿದ್ದಾರೆ.

ನವೆಂಬರ್ 25ರಂದು ಲೋಕೇಂದ್ರ ಪರಾಶರ್ ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ಪ್ರಚೋದಿಸುವ ಸಲುವಾಗಿ ಟ್ವಿಟ್ಟರ್ ಹ್ಯಾಂಡಲ್‍ನಿಂದ ವೀಡಿಯೊ ಪೋಸ್ಟ್ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಪೊಲೀಸರು ಲೋಕೇಂದ್ರ ಪರಾಶರ್ ವಿರುದ್ಧ ಐಪಿಸಿ ಸೆಕ್ಷನ್ 505, 505, 120ಬಿ ಮತ್ತು 153ರ ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ.

ಈ ವೀಡಿಯೊವನ್ನು ಕಾಂಗ್ರೆಸ್ ಒಳಜಗಳದ ಕಾರಣದಿಂದ ಟ್ವೀಟ್ ಮಾಡಿದೆ. ಮಧ್ಯಪ್ರದೇಶದ ಕಾಂಗ್ರೆಸ್‍ನ ಚಟುವಟಿಕೆಗಳನ್ನು ಬಚ್ಚಿಡುವ ವಿಫಲ ಯತ್ನವಾಗಿ ಲೋಕೇಂದ್ರ ಪರಾಶರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಹೇಳಿದ್ದಾರೆ ಎಂದು timesofindia.com ವರದಿ ಮಾಡಿದೆ.

Similar News