ಮನುವಾದಿಗಳ ಕೈಯಿಂದ ಸಂವಿಧಾನವನ್ನು ರಕ್ಷಿಸಬೇಕಾಗಿದೆ: ಸತೀಶ್ ಕುಮಾರ್

Update: 2022-11-27 13:12 GMT

ಭಟ್ಕಳ: ದೇಶದ ಅತ್ಯುನ್ನತ ಗ್ರಂಥವಾಗಿರುವ ಸಂವಿಧಾನವನ್ನು ಮನುವಾದಿಗಳಿಂದ ರಕ್ಷಿಸಬೇಕಾಗಿದೆ ಎಂದು ಸದ್ಭಾವನ ಮಂಚ್ ಅಧ್ಯಕ್ಷ  ಸತೀಶ್ ಕುಮಾರ್ ಕರೆ ನೀಡಿದರು. 

ಅವರು ಸಂವಿಧಾನ ದಿನದ ನ.26ರಂದು ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಸದ್ಭಾವನ ಮಂಚ್ ವತಿಯಿಂದ ‘ಸಾರ್ವಜನಿಕ ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉದಾತ್ತ ಆಶಯಗಳನ್ನು ಹೊಂದಿರುವ, ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ನೀಡುತ್ತಿರುವ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸಬೇಕೆಂಬ ದುಷ್ಟಾಲೋಚನೆ ಹೊಂದಿರುವ ಮನುವಾದಿಗಳು ಸಂವಿಧಾನ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಅವರಿಂದಲೇ ನಮ್ಮ ದೇಶದ ಸಂವಿಧಾನ ಸಂಕಷ್ಟದಲ್ಲಿದೆ. ಆದ್ದರಿಂದ ಮನುವಾದಿ ಗಳ ಕೈಯಿಂದ ದೇಶ ಹಾಗೂ ದೇಶದ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಅಂಜುಮನ್ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ ‘ಭಾರತ ಪ್ರಜಾಪ್ರಭುತ್ವದ ಜನನಿ’ ಎಂಬ ದ್ಯೇಯವಾಕ್ಯದೊಂದಿಗೆ ಈ ವರ್ಷ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಜಗತ್ತಿನಲ್ಲೇ ಅತಿಶ್ರೇಷ್ಟ ಸಂವಿಧಾನ ನಮ್ಮದು ಇದರ ಅಡಿಯಲ್ಲಿ ನಾವು ಬದಕುಬೇಕು. ಇಲ್ಲಿ ಯಾವುದೇ ಜಾತಿ, ಧರ್ಮ, ಭಾಷೆಗೆ ಮೇಲ್ಮೆ ಎಂಬುದಿಲ್ಲ. ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಹೊಂದಿದ್ದಾರೆ ಎಂದರು.

ನ್ಯಾಯಾವಾದಿ ಸಂತೋಷ್ ನಾಯ್ಕ ಸಂವಿಧಾನ ಪೀಠಿಕೆಯನ್ನು ಕನ್ನಡದಲ್ಲಿ ಹಾಗೂ ಮೌಲಾನ ಸೈಯ್ಯದ್ ಝುಬೇರ್ ಉರ್ದು ಭಾಷೆಯಲ್ಲಿ ವಾಚಿಸಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜ ಹಿರಿಯ ಮುಖಂಡ ಎಂ.ಆರ್.ನಾಯ್ಕ, ದಲಿತ ಮುಖಂಡರಾದ ಕೆ.ಮರಿಸ್ವಾಮಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಜಮಾಅತೆ ಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಮಾತನಾಡಿದರು. 

ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

Similar News